ಉಡುಪಿ ಜಿಲ್ಲಾಸ್ಪತ್ರೆಯ ನೂತನ ದ್ರವರೂಪದ ಆಮ್ಲಜನಕ ಘಟಕ ಉದ್ಘಾಟನೆ

Update: 2020-12-03 14:25 GMT

ಉಡುಪಿ, ಡಿ.3: ಬಹುಕಾಲದ ನಿರೀಕ್ಷೆಯ ಬಳಿಕ ಉಡುಪಿಯಲ್ಲಿ ಜಿಲ್ಲಾಸ್ಪತ್ರೆಗೆ 250 ಹಾಸಿಗೆಗಳ ಹೊಸ ಕಟ್ಟಡ ಹಾಗೂ ಹೆಚ್ಚುವರಿಯಾಗಿ ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿಗಳ ನೇಮಕಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳ ಲಾಗಿದೆ ಎಂದು ರಾಜ್ಯ ಗೃಹ ಸಚಿವ ಹಾಗೂ ಜಿಲ್ಲಾ ಉಸ್ಕುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ನೂತನವಾಗಿ ಅಳವಡಿಸಲಾದ 6,000ಲೀ. ಸಾಮರ್ಥ್ಯದ ದ್ರವರೂಪದ ಆಮ್ಲಜನಕ ಘಟಕವನ್ನು ಉದ್ಘಾಟಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.

ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ನೇಮಕಗೊಂಡ ಬಳಿಕ ಜಿಲ್ಲೆಯಾಗಿ ಇಷ್ಟು ವರ್ಷವೂ ತಾಲೂಕು ಆಸ್ಪತ್ರೆಯಾಗಿಯೇ ಉಳಿದಿದ್ದ ಈ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ನಿರ್ಧಾರ ತೆಗೆದುಕೊಂಡಿದ್ದೇನೆ. ಆಸ್ಪತ್ರೆಗೆ ಅತ್ಯಾಧುನಿಕವಾದ ಕಟ್ಟಡ ಹಾಗೂ ಜಿಲ್ಲಾಸ್ಪತ್ರೆಗೆ ಹೆಚ್ಚುವರಿ ವೈದ್ಯರು ಹಾಗೂ ಸಿಬ್ಬಂದಿಗಳ ನೇಮಕಕ್ಕೆ ಸಂಪುಟದ ಅನುಮೋದನೆಯನ್ನೂ ಪಡೆದುಕೊಳ್ಳಲಾಗಿದೆ. ಇದರಿಂದ ಆಸ್ಪತ್ರೆಗಳ ಹಾಸಿಗೆಗಳ ಸಾಮರ್ಥ್ಯ 125ರಿಂದ 250ಕ್ಕೆ ಸಿಬ್ಬಂದಿಗಳ ಸಂಖ್ಯೆ 129ರಿಂದ 195ಕ್ಕೇರಲಿದೆ ಎಂದರು.

ಹೊಸ ಕಟ್ಟಡದ ನಿರ್ಮಾಣದವರೆಗೆ ಸದ್ಯ ಹಳೆ ಆಸ್ಪತ್ರೆ ಕಟ್ಟಡದಲ್ಲಿ ಆಸ್ಪತ್ರೆ ಮುಂದುವರಿಯಲಿದೆ.ಹೊಸ ಕಟ್ಟಡವನ್ನು ಜಿಲ್ಲಾಸ್ಪತ್ರೆಯ ಆವರಣದಲ್ಲೇ ಇರುವ 11 ಎಕರೆ ಜಾಗದಲ್ಲಿ ನಿರ್ಮಿಸಲಾಗುತ್ತದೆ. ಟೆಂಡರ್ ಮುಗಿದ ಕೆಲಸ ಪ್ರಾರಂಭಗೊಂಡ 18 ತಿಂಗಳಲ್ಲಿ ಕಟ್ಟಡ ಕಾಮಗಾರಿ ಮುಗಿಯಬೇಕಿದೆ ಎಂದರು.

ಹೊಸಕಟ್ಟಡದಲ್ಲಿ ಶಸ್ತ್ರಚಿಕಿತ್ಸಾ ಕೊಠಡಿ ಸಂಕೀರ್ಣ, ಪ್ರಯೋಗಾಲಯ, ಒಳರೋಗಿ ವಾರ್ಡ್‌ಗಳು ಹಾಗೂ ಇತರೆಲ್ಲಾ ಸೌಲಭ್ಯಗಳು ಒಂದೇ ಕಡೆ ಲಭ್ಯ ವಾಗಲಿದೆ ಎಂದರು.

ಉಡುಪಿ ಶಾಸಕ ಕೆ.ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಪಂ ಸಿಇಓ ಡಾ.ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಡಿಎಚ್‌ಓ ಡಾ.ಸುಧೀರ್‌ಚಂದ್ರ ಸೂಡ, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ಭಟ್, ಜಿಪಂ ಅಧ್ಯಕ್ಷ ದಿನಕರ ಬಾಬು, ನಗರ ಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.

ಸ್ಥಳ ಪರಿಶೀಲನೆ: ಇದೇ ಸಂದರ್ಭದಲ್ಲಿ ಅವರು ನೂತನ ಜಿಲ್ಲಾಸ್ಪತ್ರೆ ನಿರ್ಮಾಣಗೊಳ್ಳುವ ಜಾಗಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದರು. ಈಗಿರುವ ಹೆಚ್ಚಿನ ಕಟ್ಟಡವನ್ನು ಉಳಿಸಿಕೊಂಡು ಹೊಸ ಕಟ್ಟಡದ ನಿರ್ಮಾಣಕ್ಕೆ ಬೇಕಾದ ನೀಲನಕ್ಷೆಯನ್ನು ಸಿದ್ಧಪಡಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News