×
Ad

ಹಣ ಅಕ್ರಮ ವರ್ಗಾವಣೆ ಪ್ರಕರಣ: ಪಿಎಫ್‌ಐ ನಾಯಕರ ನಿವಾಸ, ದೇಶದ ಕನಿಷ್ಟ 26 ಸ್ಥಳಗಳ ಮೇಲೆ ಈ.ಡಿ. ದಾಳಿ

Update: 2020-12-03 19:59 IST

ಹೊಸದಿಲ್ಲಿ, ಡಿ. 3: ಹಣ ಅಕ್ರಮ ವರ್ಗಾವಣೆ ತನಿಖೆಯ ಒಂದು ಭಾಗವಾಗಿ ಪಿಎಫ್‌ಐ ಅಧ್ಯಕ್ಷ ಒ.ಎಂ. ಅಬ್ದುಲ್ ಸಲಾಮ್ ಹಾಗೂ ಕೇರಳದ ಅಧ್ಯಕ್ಷ ನಾಸರುದ್ದೀನ್ ಎಲಮರಮ್ ಅವರ ನಿವಾಸ ಸೇರಿದಂತೆ ಪಿಎಫ್‌ಐ ನಂಟು ಹೊಂದಿದ 9 ರಾಜ್ಯಗಳಲ್ಲಿರುವ ಕನಿಷ್ಠ 26 ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಈ.ಡಿ.) ಗುರುವಾರ ದಾಳಿ ನಡೆಸಿದೆ.

ತಮಿಳುನಾಡು, ಕರ್ನಾಟಕ, ಬಿಹಾರ, ಉತ್ತರಪ್ರದೇಶ, ಮಹಾರಾಷ್ಟ್ರ, ಪಶ್ಚಿಮಬಂಗಾಳ, ರಾಜಸ್ಥಾನ, ದಿಲ್ಲಿ ಹಾಗೂ ಕೇರಳದ ಮಲಪ್ಪುರ, ತಿರುವನಂತಪುರ ಜಿಲ್ಲೆಗಳಲ್ಲಿ ಈ.ಡಿ. ದಾಳಿ ನಡೆಸಿದೆ ಎಂದು ಈ.ಡಿ.ಯ ಅಧಿಕಾರಿಗಳು ತಿಳಿಸಿದ್ದಾರೆ. ಹಣ ಅಕ್ರಮ ವರ್ಗಾವಣೆ ಕಾಯ್ದೆ ಅಡಿಯಲ್ಲಿ ಈ ರಾಜ್ಯಗಳ ಕನಿಷ್ಠ 26 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪಿಎಫ್‌ಐ ಹಾಗೂ ಅದರೊಂದಿಗೆ ನಂಟು ಹೊಂದಿದವರ ಅಕ್ರಮ ಹಣ ವರ್ಗಾವಣೆಯ ಹಲವು ಪ್ರಕರಣಗಳಿಗೆ ಸಂಬಂಧಿಸಿ ಪುರಾವೆ ಸಂಗ್ರಹಿಸುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ. ಒ.ಎಂ. ಅಬ್ದುಲ್ ಸಲಾಮ್ ಹಾಗೂ ನಾಸರುದ್ದೀನ್ ಅವರಿಗೆ ಸೇರಿದ ಸ್ಥಳಗಳು, ಪಿಎಫ್ ಐನ ಕೇರಳದ ಮುಖ್ಯ ಕಾರ್ಯಾಲಯದ ಮೇಲೆ ಕೂಡ ದಾಳಿ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ದೇಶದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ, ಈ ವರ್ಷ ಫೆಬ್ರವರಿಯಲ್ಲಿ ನಡೆದ ದಿಲ್ಲಿ ಗಲಭೆ ಹಾಗೂ ಇತರ ಕೆಲವು ಘಟನೆಗಳಿಗೆ ಉತ್ತೇಜನ ನೀಡಿದ ಆರೋಪಕ್ಕೆ ಸಂಬಂಧಿಸಿ ಪಿಎಫ್‌ಐಯ ಹಣಕಾಸು ನಂಟಿನ ಕುರಿತು ಈ.ಡಿ. ತನಿಖೆ ನಡೆಸುತ್ತಿದೆ. ‘‘ಈ.ಡಿ. ಪಿಎಫ್‌ಐ ನಾಯಕರ ನಿವಾಸದ ಮೇಲೆ ದಾಳಿ ನಡೆಸಿದೆ. ಇದು ರೈತರ ಪ್ರತಿಭಟನೆಯಿಂದ ಜನರ ಮನಸ್ಸನ್ನು ಬೇರೆಡೆ ಸೆಳೆಯುವ ಹಾಗೂ ಬಿಜೆಪಿ ಸರಕಾರದ ವೈಫಲ್ಯವನ್ನು ಬಚ್ಚಿಡುವ ಯತ್ನ ಎಂದು ಪಿಎಫ್‌ಐ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News