ಏಳು ಗಂಟೆಗಳ ಕಾಲ ನಡೆದ ಕೇಂದ್ರ ಸರಕಾರ-ರೈತರ ಮಾತುಕತೆ ಅಪೂರ್ಣ: ಡಿ.5ಕ್ಕೆ ಮತ್ತೊಮ್ಮೆ ಸಭೆ

Update: 2020-12-03 16:40 GMT

ಹೊಸದಿಲ್ಲಿ,ಡಿ.3: ಕೇಂದ್ರ ಸಚಿವರು ಮತ್ತು ಪ್ರತಿಭಟನಾನಿರತ ಸಹಸ್ರಾರು ರೈತರ ಪ್ರತಿನಿಧಿಗಳ ನಡುವೆ ಗುರುವಾರ ಇಲ್ಲಿ ನಡೆದ ಮಾತುಕತೆಗಳು ಯಾವುದೇ ಪರಿಹಾರವನ್ನು ಕಂಡುಕೊಳ್ಳಲು ವಿಫಲಗೊಂಡಿವೆ. ನೂತನ ಕೃಷಿ ಕಾನೂನುಗಳನ್ನು ಹಿಂದೆಗೆದುಕೊಳ್ಳಬೇಕು ಎಂಬ ತಮ್ಮ ಬೇಡಿಕೆಗೆ ಬಲವಾಗಿ ಅಂಟಿಕೊಂಡಿದ್ದ ರೈತ ಸಂಘಟನೆಗಳ ನಾಯಕರು ಎಂಟು ಗಂಟೆಗಳ ಸುದೀರ್ಘ ಮಾತುಕತೆಗಳ ಸಂದರ್ಭ ಸರಕಾರವು ತಮಗೆ ಒದಗಿಸಿದ್ದ ಊಟ,ಚಹಾ ಮತ್ತು ನೀರನ್ನೂ ತಿರಸ್ಕರಿಸಿದರು.

 ರೈತರ ನ್ಯಾಯಪರವಾದ ಎಲ್ಲ ಕಳವಳಗಳನ್ನು ನಿವಾರಿಸಲಾಗುವುದು ಎಂದು ಸರಕಾರವು ಸುಮಾರು 40ರಷ್ಟು ರೈತ ನಾಯಕರಿದ್ದ ನಿಯೋಗಕ್ಕೆ ಭರವಸೆ ನೀಡಿತಾದರೂ,ಕೃಷಿ ಕಾನೂನುಗಳಲ್ಲಿಯ ದೋಷಗಳು ಮತ್ತು ಕೊರತೆಗಳನ್ನು ಬೆಟ್ಟುಮಾಡಿದ ನಿಯೋಗವು,ಈ ಕಾನೂನುಗಳನ್ನು ಸೆಪ್ಟಂಬರ್‌ನಲ್ಲಿ ಅವಸರದಿಂದ ಅಂಗೀಕರಿಸಲಾಗಿದೆ ಎಂದು ಹೇಳಿತು.

ಮಾತುಕತೆಗಳ ಸಂದರ್ಭ ಸರಕಾರದ ತಂಡದ ನೇತೃತ್ವವನ್ನು ವಹಿಸಿದ್ದ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ರೈತರ ಶಂಕೆಗಳನ್ನು ನಿವಾರಿಸಿದ್ದಾರೆ ಎಂದು ಕೃಷಿ ಸಚಿವಾಲಯವು ಟ್ವೀಟಿಸಿದೆ.

ಮುಂದಿನ ಮಾತುಕತೆಗಳು ಶನಿವಾರ ಅಪರಾಹ್ನ ಎರಡು ಗಂಟೆಗೆ ನಡೆಯಲಿವೆ ಎಂದು ತೋಮರ್ ಸುದ್ದಿಗಾರರಿಗೆ ತಿಳಿಸಿದರು.

ಮಾತುಕತೆಗಳು ನಡೆದ ವಿಜ್ಞಾನ ಭವನದಿಂದ ಘೋಷಣೆಗಳನ್ನು ಕೂಗುತ್ತ ಹೊರಗೆ ಬಂದ ರೈತ ಸಂಘಟನೆಗಳ ನಾಯಕರು, ಮಾತುಕತೆಗಳು ವಿಫಲಗೊಂಡಿವೆ ಎಂದು ತಿಳಿಸಿದರು. ಗುರುವಾರ ಪರಿಹಾರವೊಂದನ್ನು ಕಂಡುಕೊಳ್ಳದಿದ್ದರೆ ಮುಂದಿನ ಯಾವುದೇ ಮಾತುಕತೆಗಳನ್ನು ಬಹಿಷ್ಕರಿಸುವುದಾಗಿ ಅವರ ಪೈಕಿ ಕೆಲವರು ಹೇಳಿದರು.

‘ನಮ್ಮ ಕಡೆಯಿಂದ ಚರ್ಚೆಗಳು ಮುಗಿದಿವೆ. ಸರಕಾರವು ಇಂದೇ ಪರಿಹಾರವನ್ನು ಕಂಡುಕೊಳ್ಳದಿದ್ದರೆ ಮುಂದಿನ ಮಾತುಕತೆಗಳಿಗೆ ತಾವು ಹಾಜರಾಗುವುದಿಲ್ಲ ಎಂದು ನಮ್ಮ ನಾಯಕರು ತಿಳಿಸಿದ್ದಾರೆ ’ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಸಿಸಿ)ಯ ಕಾರ್ಯಕಾರಿ ಸಮಿತಿಯ ಸದಸ್ಯೆ ಮತ್ತು ಮಹಾರಾಷ್ಟ್ರ ಹಾಗೂ ಗುಜರಾತಿನ ರೈತರನ್ನು ಪ್ರತಿನಿಧಿಸುವ ಲೋಕಸಂಘರ್ಷ ಮೋರ್ಚಾದ ಅಧ್ಯಕ್ಷೆ ಪ್ರತಿಭಾ ಶಿಂದೆ ತಿಳಿಸಿದರು.

ಎಂಎಸ್‌ಪಿ ಮತ್ತು ಖರೀದಿ ವ್ಯವಸ್ಥೆ ಸೇರಿದಂತೆ ಹಲವಾರು ಪ್ರಸ್ತಾವಗಳನ್ನು ಸರಕಾರವು ಮಂಡಿಸಿದ್ದು,ಸರಕಾರದೊಂದಿಗೆ ಮುಂದಿನ ಮಾತುಕತೆಗಳಿಗೆ ಮುನ್ನ ಶುಕ್ರವಾರ ರೈತ ಸಂಘಟನೆಗಳು ಈ ಬಗ್ಗೆ ಚರ್ಚಿಸಲಿವೆ ಎಂದು ಇನ್ನೋರ್ವ ರೈತ ನಾಯಕ ಕುಲವಂತ ಸಿಂಗ್ ಸಂಧು ತಿಳಿಸಿದರು.

ಮೂರು ಕೃಷಿ ಕಾನೂನುಗಳ ಬಗ್ಗೆ ವಿವರಿಸಿದ ಸರಕಾರವು,ರೈತರ ಏಳಿಗೆಯ ಅವುಗಳ ಉದ್ದೇಶವನ್ನು ಪುನರುಚ್ಚರಿಸಿತು. ಆದರೆ ಮೂವರು ಕೇಂದ್ರ ಸಚಿವರೊಂದಿಗೆ ತಮ್ಮ ನಾಲ್ಕನೇ ಸುತ್ತಿನ ಮಾತುಕತೆಗಳಲ್ಲಿ ರೈತ ನಾಯಕರು ಸರಕಾರದ ನಿಲುವನ್ನು ತಿರಸ್ಕರಿಸಿದರು ಎಂದು ಬಲ್ಲ ಮೂಲಗಳು ತಿಳಿಸಿದವು.

ತೋಮರ್ ಅವರೊಂದಿಗೆ ರೈಲ್ವೆ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹಾಗೂ ಪಂಜಾಬ್ ಸಂಸದರೂ ಆಗಿರುವ ಸಹಾಯಕ ವಾಣಿಜ್ಯ ಸಚಿವ ಸೋಮ್ ಪ್ರಕಾಶ್ ಅವರೂ ಸಭೆಯಲ್ಲಿ ಪಾಲ್ಗೊಂಡಿದ್ದರು.

ರೈತರು ಮತ್ತು ಸರಕಾರದ ನಡುವಿನ ಮೂರನೇ ಸುತ್ತಿನ ಮಾತುಕತೆಗಳು ಡಿ.1ರಂದು ನಡೆದಿದ್ದವು. ಆದರೆ ನೂತನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರು ಎತ್ತಿರುವ ವಿಷಯಗಳನ್ನು ಪರಿಶೀಲಿಸಲು ನೂತನ ಸಮಿತಿಯೊಂದನ್ನು ರಚಿಸುವ ಸರಕಾರದ ಪ್ರಸ್ತಾವವನ್ನು ರೈತ ಗುಂಪುಗಳು ತಿರಸ್ಕರಿಸಿದ್ದರಿಂದ ಮೂರು ಗಂಟೆಗಳ ಕಾಲ ನಡೆದಿದ್ದ ಮಾತುಕತೆಗಳು ಬಿಕ್ಕಟ್ಟಿನಲ್ಲಿ ಕೊನೆಗೊಂಡಿದ್ದವು.

ಸರಕಾರದ ಹಂಗಿನಲ್ಲಿ ಬೀಳದ ರೈತ ನಾಯಕರು

ಸಭೆಯಲ್ಲಿ ಪಾಲ್ಗೊಂಡಿದ್ದ 40 ರೈತ ನಾಯಕರು ಸರಕಾರವು ತಮಗೆ ಒದಗಿಸಿದ್ದ ಊಟವನ್ನು ತಿರಸ್ಕರಿಸಿ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿಯಿಂದ ತಾವು ವ್ಯಾನಿನಲ್ಲಿ ತಂದಿದ್ದ ಆಹಾರವನ್ನು ಸೇವಿಸಿದರು. ಅಪರಾಹ್ನ ಆರಂಭವಾಗಿದ್ದ ಸಭೆಯಲ್ಲಿ ತಮಗೆ ನೀಡಲಾಗಿದ್ದ ಚಹಾ ಮತ್ತು ನೀರನ್ನೂ ಅವರು ಧಿಕ್ಕರಿಸಿದರು.

ಊಟ ನೀಡುವ ಮೂಲಕ ಉತ್ತಮ ಆತಿಥೇಯರಾಗಲು ಪ್ರಯತ್ನಿಸುವ ಬದಲು ಸಮಸ್ಯೆಗಳನ್ನು ಬಗೆಹರಿಸಲು ಗಮನವನ್ನು ಕೇಂದ್ರೀಕರಿಸುವಂತೆ ರೈತ ನಾಯಕರು ಸರಕಾರಕ್ಕೆ ತಿಳಿಸಿದರು ಎಂದು ಹೇಳಿದ ಶಿಂದೆ,‘ನಮ್ಮ ಸಾವಿರಾರು ರೈತರು ರಸ್ತೆಗಳಲ್ಲಿ ಧರಣಿ ನಡೆಸುತ್ತಿರುವಾಗ ಸರಕಾರವು ನೀಡಿದ ಊಟವನ್ನು ನಾವು ಮಾಡಲು ಹೇಗೆ ಸಾಧ್ಯ ’ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News