​ಉಳ್ಳಾಲ ಬೋಟ್ ದುರಂತ: ಪತ್ತೆಯಾಗದ ಮೀನುಗಾರ

Update: 2020-12-03 16:18 GMT

ಮಂಗಳೂರು, ಡಿ.3: ಉಳ್ಳಾಲ ಬೋಟ್ ದುರಂತ ಸಂಭವಿಸಿದ ಸ್ಥಳದಲ್ಲಿ ಪತ್ತೆ ಕಾರ್ಯ ನಡೆಸಿದರೂ ಇದುವರೆಗೆ ಮೀನುಗಾರನ ಪತ್ತೆಯಾಗಿಲ್ಲ. ದಿನವಿಡೀ ಹುಡುಕಾಡಿದರೂ ಯಾವುದೇ ಫಲಿತಾಂಶ ದೊರೆತಿಲ್ಲ. ಮುಳುಗು ತಜ್ಞರು ಬರಿಗೈಲಿ ಗುರುವಾರ ವಾಪಸಾಗಿದ್ದಾರೆ.
ನ.30ರಂದು ಮೀನುಗಾರಿಕೆಗೆ ತೆರಳಿದ್ದ ‘ಶ್ರೀರಕ್ಷಾ’ ಹೆಸರಿನ ಬೋಟು ದುರಂತಕ್ಕೀಡಾಗಿತ್ತು. 25 ಮಂದಿ ಪೈಕಿ 19 ಮಂದಿ ರಕ್ಷಣೆಗೊಳಗಾಗಿ ಆರು ಮೀನುಗಾರರು ನಾಪತ್ತೆಯಾಗಿದ್ದರು. ಈ ಪೈಕಿ ಐವರ ಮೃತದೇಹಗಳು ಈಗಾಗಲೇ ಪತ್ತೆಯಾಗಿದೆ. ನಾಪತ್ತೆಯಾದ ಮತ್ತೋರ್ವ ಮೀನುಗಾರನಿಗೆ ದಿನವಿಡೀ ಹುಡುಕಾಟ ನಡೆಸಲಾಯಿತು.

ಗುರುವಾರ ನಸುಕಿನಜಾವ 15ಕ್ಕೂ ಹೆಚ್ಚು ಪರ್ಸಿನ್ ಬೋಟುಗಳು ನಾಪತ್ತೆಯಾದ ಮೀನುಗಾರರನ ಪತ್ತೆ ಮಾಡಲು ಮಂಗಳೂರಿನ ಬಂದರ್‌ನಿಂದ ಪ್ರಯಾಣ ಬೆಳೆಸಿದ್ದವು. ಜೊತೆಗೆ ಮುಳುಗು ತಜ್ಞರು, ಸ್ಥಳೀಯ ಮೀನುಗಾರರು ಕೂಡ ತೆರಳಿದ್ದರು. ಸಂಜೆವರೆಗೂ ಪತ್ತೆ ಕಾರ್ಯ ನಡೆಸಲಾಯಿತು.

ಬೋಟು ಮುಳುಗಿದ ಪ್ರದೇಶದ ಸುತ್ತಮುತ್ತ ಪತ್ತೆಕಾರ್ಯದ ಬೋಟುಗಳು ಸುತ್ತುತ್ತಲೇ ಇದ್ದವು. ಮುಳುಗು ತಜ್ಞರು ತೀವ್ರ ಹುಡುಕಾಟ ನಡೆಸಿದರು. ಮೀನುಗಾರಿಕೆಗೆ ಬಳಸಿದ್ದ ಬಹುತೇಕ ಬಲೆಯನ್ನು ಮೇಲಕ್ಕೆ ಎಳೆಯಲಾಗಿದೆ. ಮುಳುಗಡೆಯಾದ ಬೋಟು ಸಮುದ್ರದ ತಳ ಮುಟ್ಟಿದ್ದು, ನಾಪತ್ತೆಯಾದ ಮೀನುಗಾರ ಬೋಟಿನೊಳಗೆ ಸಿಲುಕಿರಬಹುದು ಅಥವಾ ಸಮುದ್ರದ ಮರಳು ಮಿಶ್ರಿತ ಕೆಸರಿನಲ್ಲೂ ಸಿಲುಕಿರುವ ಸಾಧ್ಯತೆ. ಸದ್ಯ ಸಂಜೆ ವೇಳೆಗೆ ಕಾರ್ಯಾಚರಣೆ ಮೊಟಕುಗೊಳಿಸಲಾಗಿದೆ ಎಂದು ಪರ್ಸಿನ್ ಬೋಟ್ ಮಾಲಕರ ಸಂಘದ ಅಧ್ಯಕ್ಷ ಶಶಿಕುಮಾರ್ ಬೆಂಗ್ರೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News