ಯಕ್ಷಾಂಗಣದಿಂದ ರಾಜ್ಯೋತ್ಸವ ಕಲಾ ಸಂಭ್ರಮ

Update: 2020-12-03 16:20 GMT

 ಮಂಗಳೂರು, ಡಿ.3: ಯಕ್ಷಗಾನ ನಮ್ಮ ನಾಡಿನ ಶ್ರೀಮಂತ ಕಲೆ. ಅದರ ಒಂದು ಪ್ರಕಾರವಾದ ತಾಳಮದ್ದಳೆ ಕನ್ನಡ ಭಾಷೆಯ ಪ್ರಬುದ್ಧತೆಯನ್ನು ಸಾರುತ್ತದೆ. ಇಂದು ಕನ್ನಡ ಸಾಹಿತ್ಯ-ಸಂಸ್ಕೃತಿ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿರುವ ಈ ಭಾಗದ ಸಾಹಿತಿ ಕಲಾವಿದರಿಗೆ ಮೂಲ ಪ್ರೇರಣೆಯೇ ಯಕ್ಷಗಾನ. ಕರಾವಳಿಯಲ್ಲಿ ಕನ್ನಡದ ನಿಜವಾದ ಅಸ್ಮಿತೆ ಇರುವುದು ಯಕ್ಷಗಾನದಿಂದ ಎಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಹೇಳಿದ್ದಾರೆ.

ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಇವರ ಆಶ್ರಯದಲ್ಲಿ ಶಕ್ತಿನಗರ ಶ್ರೀಗೋಪಾಲಕೃಷ್ಣ ದೇವಸ್ಥಾನದ ಪಾರಿಜಾತ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಕಲಾಸಂಭ್ರಮದ ಅಂಗವಾಗಿ ಇತ್ತೀಚೆಗೆ ಜರುಗಿದ ‘ಯಕ್ಷಗಾನ ತಾಳಮದ್ದಳೆ ಪರ್ವ-2020’ ಎಂಟನೇ ವರ್ಷದ ನುಡಿಹಬ್ಬದಲ್ಲಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಕ್ತಿನಗರ ಶ್ರೀಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಕೆ.ಸಿ.ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಭಾಷಣಗೈದರು.

ಪ್ರಶಸ್ತಿ ಪ್ರದಾನ : ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರ ಜೀವಮಾನ ಸಾಧನೆಗಾಗಿ ’ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ಮತ್ತು ಹಿರಿಯ ಯಕ್ಷಗಾನ ವೇಷದಾರಿ, ಮೇಳದ ಸಂಚಾಲಕ ಕೆ.ಎಚ್.ದಾಸಪ್ಪರೈ ಪುತ್ತೂರು ಅವರಿಗೆ 2019-20ನೇ ಸಾಲಿನ ‘ಯಕ್ಷಾಂಗಣ ಗೌರವ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು. ಬ್ಯಾಂಕ್ ಆಫ್ ಬರೋಡ ಮಂಗಳೂರು ವಲಯದ ಮಹಾಪ್ರಬಂಧಕಿ ಸುಜಯ ಯು. ಶೆಟ್ಟಿ ಪ್ರಶಸ್ತಿ ಪ್ರದಾನಗೈದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊರನಾಡ ಕನ್ನಡಿಗ ಕೆ.ಡಿ.ಶೆಟ್ಟಿ ಮುಂಬೈ ಅವರನ್ನು ಗೌರವಿಸಲಾಯಿತು. ಕೆ. ರವೀಂದ್ರ ರೈ ಕಲ್ಲಿಮಾರು, ನಿವೇದಿತಾ ಎನ್.ಶೆಟ್ಟಿ ಮತ್ತು ಸುಮಾ ಪ್ರಸಾದ್ ಸನ್ಮಾನ ಫಲಕ ವಾಚಿಸಿದರು. ಸುಧಾಕರ ರಾವ್ ಪೇಜಾವರ ಅಭಿನಂದನ ಗೈದರು. ದಿ.ಬೆಟ್ಟಂಪಾಡಿ ಬಾಳಪ್ಪಶೆಟ್ಟಿ ಯಕ್ಷಪ್ರತಿಷ್ಠಾನದ ಅಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಪ್ರತಿಷ್ಠಾನದ ವತಿಯಿಂದ ದಾಸಪ್ಪರೈ ಅವರಿಗೆ ಕಲಾ ಗೌರವ ನೀಡಿದರು.

ಹಿರಿಯರ ಸಂಸ್ಮರಣೆ : ಯಕ್ಷಗಾನ ರಂಗದ ಹಿರಿಯ ಚೇತನಗಳಾದ ಬೆಟ್ಟಂಪಾಡಿ ಬಾಳಪ್ಪಶೆಟ್ಟಿ, ಎ.ಕೆ. ನಾರಾಯಣ ಶೆಟ್ಟಿ ಮತ್ತು ಎ.ಕೆ. ಮಹಾಬಲ ಶೆಟ್ಟಿ ಅವರ ಸಂಸ್ಮರಣೆಯೊಂದಿಗೆ ನುಡಿ ನಮನ ಸಲ್ಲಿಸಲಾಯಿತು.

ಮಹೇಶ್ ಮೋಟರ್ಸ್‌ ಮಾಲಕ ಎ.ಕೆ. ಜಯರಾಮ ಶೇಖ, ದ.ಕ.ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಪಮ್ಮಿ ಕೊಡಿಯಾಲ್‌ಬೈಲ್, ಪುಳಿಂಚ ಸೇವಾ ಟ್ರಸ್ಟ್ ಅಧ್ಯಕ್ಷ ನ್ಯಾಯವಾದಿ ಶ್ರೀಧರ ಶೆಟ್ಟಿ ಪುಳಿಂಚ, ತುಳು ಅಕಾಡಮಿಯ ಸದಸ್ಯ ಲೀಲಾಕ್ಷ ಬಿ. ಕರ್ಕೇರ ಮತ್ತು ಕಲಾಸಂಘಟಕ ಕರ್ನೂರು ಮೋಹನ ರೈ ಅತಿಥಿಗಳಾಗಿದ್ದರು.

ಯಕ್ಷಾಂಗಣದ ಪದಾಧಿಕಾರಿಗಳಾದ ಕರುಣಾಕರ ಶೆಟ್ಟಿ ಪಣಿಯೂರು, ಸುಂದರ ಶೆಟ್ಟಿ ಬೆಟ್ಟಂಪಾಡಿ, ಸಿದ್ಧಾರ್ಥ ಅಜ್ರಿ, ಕೃಷ್ಣಪ್ಪಗೌಡ ಪಡ್ಡಂಬೈಲ್ ಹಾಗೂ ದೇವಳದ ಆಡಳಿತಾಧಿಕಾರಿ ಕೃಷ್ಣಕುಮಾರ್ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ತುಳುವರ್ಲ್ಡ್ ಅಧ್ಯಕ್ಷ ರಾಜೇಶ್ ಕೃಷ್ಣ ಆಳ್ವ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News