2024ರಲ್ಲಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ ಟ್ರಂಪ್ !

Update: 2020-12-03 17:53 GMT

ವಾಶಿಂಗ್ಟನ್, ಡಿ. 3: ನವೆಂಬರ್ 3ರಂದು ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಬದಲಾಯಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪ್ರಯತ್ನಗಳಿಗೆ ದಿನದಿಂದ ದಿನಕ್ಕೆ ಹಿನ್ನಡೆಯಾಗುತ್ತಿರುವ ಹಿನ್ನೆಲೆಯಲ್ಲಿ ತನ್ನ ನಿಲುವನ್ನು ಬದಲಾಯಿಸಿರುವ ಅವರು, 2024ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವ ಇಚ್ಛೆಯನ್ನು ಬಹಿರಂಗಪಡಿಸಿದ್ದಾರೆ.

‘‘ಕಳೆದ ನಾಲ್ಕು ವರ್ಷಗಳು ಅಮೋಘವಾಗಿದ್ದವು. ನಾವು ಇನ್ನೊಂದು ನಾಲ್ಕು ವರ್ಷಗಳ ಅವಧಿಗೆ ಮುಂದುವರಿಯಲು ಪ್ರಯತ್ನಿಸುತ್ತಿದ್ದೇವೆ. ಸಾಧ್ಯವಾಗದಿದ್ದರೆ, ನಾನು ಇನ್ನು ನಾಲ್ಕು ವರ್ಷಗಳಲ್ಲಿ ಮತ್ತೆ ನಿಮ್ಮನ್ನು ನೋಡುತ್ತೇನೆ’’ ಎಂದು ಶ್ವೇತಭವನದಲ್ಲಿ ಮಂಗಳವಾರ ನಡೆದ ಕ್ರಿಸ್ಮಸ್ ಪಾರ್ಟಿಯಲ್ಲಿ ಭಾಗವಹಿಸಿದ ಅತಿಥಿಗಳಿಗೆ ಅವರು ಹೇಳಿದ್ದಾರೆ ಎಂದು ‘ಏಜನ್ಸಿ ಫ್ರಾನ್ಸ್ ಪ್ರೆಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಕಾರ್ಯಕ್ರಮದಲ್ಲಿ ರಿಪಬ್ಲಿಕ್ ಪಕ್ಷದ ಹಲವು ಪ್ರಭಾವಿಗಳು ಭಾಗವಹಿಸಿದ್ದರು. ಆದರೆ, ಅಲ್ಲಿಗೆ ಮಾಧ್ಯಮಗಳಿಗೆ ಪ್ರವೇಶವಿರಲಿಲ್ಲ. ಆದರೂ, ನಿರ್ಗಮನ ಅಧ್ಯಕ್ಷ ಟ್ರಂಪ್ ಅಲ್ಲಿ ಮಾಡಿರುವ ಭಾಷಣ ತಕ್ಷಣ ಬಹಿರಂಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News