ಚೆಸ್ ಒಲಿಂಪಿಯಾಡ್ ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ತಂಡಕ್ಕೆ ಕಸ್ಟಮ್ಸ್ ಸುಂಕದ ಬರೆ!

Update: 2020-12-04 10:26 GMT

ಹೊಸದಿಲ್ಲಿ : ಆಗಸ್ಟ್ ತಿಂಗಳಲ್ಲಿ ನಡೆದ  ಪ್ರತಿಷ್ಠಿತ ಫಿಡೆ (ಇಂಟರ್ ನ್ಯಾಷನಲ್ ಚೆಸ್ ಫೆಡರೇಶನ್) ಆನ್ ಲೈನ್  ಚೆಸ್ ಒಲಿಂಪಿಯಾಡ್‍ನಲ್ಲಿ ಭಾರತಕ್ಕೆ ಪ್ರಥಮ ಬಾರಿ ಚಿನ್ನದ ಪದಕ ದೊರಕಿಸಿ ಕೊಟ್ಟ ದೇಶದ ಚೆಸ್ ತಂಡಕ್ಕೆ ತಾನು ಗೆದ್ದ ಚಿನ್ನದ ಪದಕಗಳನ್ನು ಪಡೆಯಲು ಕಸ್ಟಮ್ಸ್ ಸುಂಕ ಪಾವತಿಸಬೇಕಾಗಿ ಬಂದಿದ್ದು ದುರಂತವೇ ಸರಿ.

ಈ ವಿಚಾರ  ಈ ಚಾಂಪಿಯನ್‍ಶಿಪ್ ನಡೆದು ಮೂರು ತಿಂಗಳ ನಂತರ  ಬೆಳಕಿಗೆ ಬಂದಿದೆ.

ಭಾರತೀಯ ತಂಡದ ಉಪ-ನಾಯಕನಾಗಿದ್ದ ಬೆಂಗಳೂರು ನಿವಾಸಿ ಶ್ರೀನಾಥ್ ನಾರಾಯಣನ್ ಬುಧವಾರ ಹೀಗೆಂದು ಟ್ವೀಟ್ ಮಾಡಿದ್ದರು- ``ಪದಕಗಳು ಇಲ್ಲಿವೆ. ಥ್ಯಾಂಕ್ಯೂ ಫಿಡೆ ಚೆಸ್.  ತಂಡದ ಉಳಿದವರಿಗೆ ಕಳುಹಿಸಲು  ಸಿದ್ಧತೆ ನಡೆಯುತ್ತಿದೆ. ಅದನ್ನು ಪಡೆಯುವುದು ಅಷ್ಟು ಸುಲಭವಾಗಿರಲಿಲ್ಲ. ರಷ್ಯದಿಂದ ಭಾರತಕ್ಕೆ ಮೂರು ದಿನಗಳಲ್ಲಿ ತಲುಪಿದ್ದರೆ,  ಬೆಂಗಳೂರಿನಿಂದ ನಮಗೆ ತಲುಪಲು ಒಂದು ವಾರಕ್ಕೂ ಹೆಚ್ಚು ಸಮಯವಾಯಿತು, ಜತೆಗೆ ಕಸ್ಟಮ್ಸ್ ಸುಂಕವನ್ನೂ ಪಾವತಿಸಬೇಕಾಯಿತು.''

ಕೇಂದ್ರ ಸರಕಾರದ ಜೂನ್ 30, 2017ರ ಅಧಿಸೂಚನೆಯಂತೆ ಭಾರತೀಯ ಕ್ರೀಡಾ ತಂಡದ ಸದಸ್ಯರು ಅಂತರ್ ರಾಷ್ಟ್ರೀಯ ಪಂದ್ಯಾಟಗಳಲ್ಲಿ ಗೆಲ್ಲುವ ಪದಕಗಳು ಮತ್ತು ಟ್ರೋಫಿಗಳಿಗೆ  ಕಸ್ಟಮ್ಸ್ ಸುಂಕ ವಿನಾಯಿತಿಯಿದೆ.

ಆದರೆ ತಾವು ಕೊರಿಯರ್ ಸಂಸ್ಥೆ ಡಿಎಚ್‍ಎಲ್ ಎಕ್ಸಪ್ರೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ಗೆ ರೂ 6300 ಕಸ್ಟಮ್ಸ್ ಸುಂಕ ಪಾವತಿಸಬೇಕಾಯಿತು. ``ಈ ವಿಷಯದಿಂದ ನನಗೆ ಬೇಸತ್ತು ಹೋಗಿದೆ,  ಹಾಗೆಯೇ ಪಾವತಿಸಿ ಬಿಟ್ಟೆ. ಅವರು (ಕಸ್ಟಮ್ಸ್ ಅಧಿಕಾರಿಗಳು) ಪ್ಯಾಕೇಜ್ ತೆರೆದು ಒಳಗೆ ಏನಿದೆ. ಅದನ್ನು ತಯಾರಿಸಲು ಬಳಸಲಾದ  ಲೋಹ ಯಾವುದು ಎಂದು ಕೇಳಿದರು. ಈ ಕುರಿತು ಅಧಿಕೃತ ದಾಖಲೆ ನೀಡಿದ್ದೆ,'' ಎಂದು ನಾರಾಯಣನ್ ಹೇಳಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಒಂದು ವಾರ ಇದ್ದ ಪದಕಗಳನ್ನು ನಂತರ ಚೆನ್ನೈಗೆ ಕೊರಿಯರ್ ಮಾಡಲಾಗಿತ್ತು. ಉಪ-ನಾಯಕ ಅದನ್ನು ಇತರ ಸದಸ್ಯರಿಗೆ ಕಳುಹಿಸಿ ಕೊಡಲಿದ್ದಾರೆ.

ಈ ಚಾಂಪಿಯನಶಿಪ್‍ನಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತ ತಂಡದಲ್ಲಿ ವಿಶ್ವನಾಥನ್ ಆನಂದ್, ಕೊನೇರು ಹಂಪಿ ಹಾಗೂ ಆರ್. ಪ್ರಗ್ನಾನಂದ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News