ಮೊದಲ ಟ್ವೆಂಟಿ-20: ಭಾರತಕ್ಕೆ ರೋಚಕ ಜಯ
ಕ್ಯಾನ್‌ಬೆರಾ: ಸ್ಪಿನ್ನರ್ ಯಜುವೇಂದ್ರ ಚಹಾಲ್ ಹಾಗೂ ಮಧ್ಯಮ ವೇಗದ ಬೌಲರ್ ನಟರಾಜನ್ ಅವರ ಶಿಸ್ತುಬದ್ಧ ಬೌಲಿಂಗ್ ನೆರವಿನಿಂದ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯದ ವಿರುದ್ಧ ಶುಕ್ರವಾರ ಇಲ್ಲಿ ನಡೆದ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ 11 ರನ್ ಗಳಿಂದ ರೋಚಕ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ವಿರಾಟ್ ಕೊಹ್ಲಿ ಪಡೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತವು ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 161 ರನ್ ಗಳಿಸಿತು. ಗೆಲ್ಲಲು 162 ರನ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯವು 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಆತಿಥೇಯರ ಪರ ನಾಯಕ ಆ್ಯರೊನ್ ಫಿಂಚ್ ಗರಿಷ್ಠ ಸ್ಕೋರ್(35, 26 ಎಸೆತ, 5 ಬೌಂಡರಿ, 1 ಸಿಕ್ಸರ್)ಗಳಿಸಿದರೆ, ಅರ್ಕಿ ಶಾರ್ಟ್(34), ಹೆನ್ರಿಕ್ಸ್(30) ಒಂದಷ್ಟು ಪ್ರತಿರೋಧ ಒಡ್ಡಿದರು.
ಭಾರತದ ಪರ ಲೆಗ್ ಸ್ಪಿನ್ನರ್ ಚಹಾಲ್ 25 ರನ್‌ಗೆ 3 ವಿಕೆಟ್‌ಗಳನ್ನು ಪಡೆದು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಚಹಾಲ್‌ಗೆ ತಕ್ಕ ಸಾಥ್ ನೀಡಿದ ಚೆನ್ನೈ ಬೌಲರ್ ನಟರಾಜನ್(3-30) ಚೊಚ್ಚಲ ಪಂದ್ಯದಲ್ಲಿ ಮಿಂಚಿ ಗಮನ ಸೆಳೆದರು.
ಎರಡನೇ ಪಂದ್ಯವು ಸಿಡ್ನಿಯಲ್ಲಿ ರವಿವಾರ(ಡಿ.6)ನಡೆಯಲಿದೆ.