ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರುಗಳ ನಾಮಕರಣ ತಡೆಯಲು ಕಾಂಗ್ರೆಸ್ ಯತ್ನ : ಪ್ರೇಮಾನಂದ ಶೆಟ್ಟಿ ಆರೋಪ
ಮಂಗಳೂರು, ಡಿ.4: ನಗರದ ಲೇಡಿಹಿಲ್ ವೃತ್ತಕ್ಕೆ ನಾರಾಯಣಗುರುಗಳ ಹೆಸರಿಡುವುದನ್ನು ತಡೆಯುವ ಪ್ರಯತ್ನವನ್ನು ಕಾಂಗ್ರೆಸ್ ಕಾರ್ಪೊರೇಟರ್‌ಗಳು ಮಾಡುತ್ತಿದ್ದಾರೆ ಎಂದು ಮಹಾ ನಗರಪಾಲಿಕೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಆರೋಪಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿಂದು ಈ ಆರೋಪ ಮಾಡಿದ ಅವರು, ಇದಕ್ಕಾಗಿಯೇ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರಿಡಬೇಕೆಂದು ಮನಪಾ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಕಾರ್ಪೊರೇಟರ್‌ಗಳು ಕಾರ್ಯಸೂಚಿ ಮಂಡಿಸಿದ್ದಾರೆ ಎಂದರು.
ಒಟ್ಟಾರೆಯಾಗಿ ಗೊಂದಲ ಸಷ್ಟಿಸುವುದು ಮತ್ತು ಲೇಡಿಹಿಲ್ ವೃತ್ತಕ್ಕೆ ನಾರಾಯಣ ಗುರುಗಳ ಹೆಸರನ್ನು ಇಡದಂತೆ ತಡೆಯುವುದು ಕಾಂಗ್ರೆಸ್‌ನ ಕಾರ್ಯಸೂಚಿಯ ಉದ್ದೇಶವಾಗಿದೆ. ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್‌ಗಳು ಮಹಾನಗರ ಪಾಲಿಕೆಯ ಪರಿಷತ್ ಸಭೆಯಲ್ಲಿ ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡುವ ಕಾರ್ಯಸೂಚಿಗೆ ಯಾವುದೇ ವಿರೋಧ ವ್ಯಕ್ತ ಪಡಿಸಿಲ್ಲ. ಆದರೆ ಸ್ಥಾಯಿ ಸಮಿತಿಯ ಸಭೆಯಲ್ಲಿ ಸಾಕಷ್ಟು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದವರು ಹೇಳಿದರು.
ಡಿ.2ರಂದು ನಡೆದ ಪರಿಷತ್ತಿನ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಅಬ್ದುಲ್ ರವೂಫ್ ಏಕಾಏಕಿಯಾಗಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರು ಇಡಬೇಕೆಂದು ಕಾರ್ಯಸೂಚಿ ಮಂಡನೆ ಮಾಡಿದ್ದಾರೆ. ಆ ಕಡತದಲ್ಲಿ ರೈಲು ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರಿಡಲು ಯಾವುದೇ ಸಾರ್ವಜನಿಕರ ಒತ್ತಾಯವಿರಲಿಲ್ಲ. ಆದರೆ ಲೇಡಿಹಿಲ್ ವೃತ್ತಕ್ಕೆ ‘ಬ್ರಹ್ಮಶ್ರೀ ನಾರಾಯಣ ಗುರು ವೃತ್ತ’ ಎಂದು ನಾಮಕರಣ ಮಾಡಲು 2003ರಿಂದಲೇ ಜನತೆಯ ಆಗ್ರಹವಿದೆ. ಆ ವರ್ಷದ ಆಗಸ್ಟ್ ತಿಂಗಳಲ್ಲಿ ನಡೆದ ಪರಿಷತ್ತಿನ ಸಭೆಯಲ್ಲಿ ಲೇಡಿಹಿಲ್ ವೃತ್ತಕ್ಕೆ ‘ಬ್ರಹ್ಮಶ್ರೀ ನಾರಾಯಣ ಗುರು ವೃತ್ತ’ವೆಂದು ನಾಮಕರಣ ಮಾಡುವ ಕಾರ್ಯಸೂಚಿಗೆ ಅನುಮೋದನೆ ಸಿಕ್ಕಿತ್ತು. ಆಗ ದಿವಾಕರ್ ಮಹಾಪೌರರಾಗಿದ್ದರು. ಆ ನಿರ್ಣಯವನ್ನು ಮುಂದೂಡಲಾಗಿತ್ತು ಎಂದು ಪ್ರೇಮಾನಂದ ಶೆಟ್ಟಿ ಹೇಳಿದರು.
ಯಾವುದೇ ಸಂಸ್ಥೆ, ರಸ್ತೆ ಅಥಾವ ವೃತ್ತಗಳ ಹೆಸರು ಪುನರಾವರ್ತನೆ ಆಗಕೂಡದೆಂಬ ನಿಯಮ 2009ರಿಂದ ಜಾರಿಯಲ್ಲಿದೆ. ಈ ನಿಯಮದ ಬಗ್ಗೆ ಕಾಂಗ್ರೆಸ್ ಪಕ್ಷದ ಕಾರ್ಪೊರೇಟರ್‌ಗಳಿಗೆ ಅರಿವಿದೆ. ನಾಮಕರಣ ಪ್ರಕ್ರಿಯೆಯನ್ನು ವಿಳಂಬಗೊಳಿಸುವುದು ಮತ್ತು ಕಾನೂನು ಹೋರಾಟ ಮಾಡು ವವರಿಗೆ ಪೂರಕ ದಾಖಲೆ ಒದಗಿಸಲು ಸಹಕರಿಸುವುದು ಕಾಂಗ್ರೆಸಿಗರ ತಂತ್ರಗಾರಿಕೆಯಾಗಿದೆ ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಕಸ್ತೂರಿ ಪಂಜ, ಸುಧೀರ್ ಶೆಟ್ಟಿ ಕಣ್ಣೂರು ಮತ್ತು ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕುಮಾರ್ ಉಪಸ್ಥಿತರಿದ್ದರು.