ಕಡಿಮೆ ದರದಲ್ಲಿ ಆಹಾರ ಧಾನ್ಯಗಳ ಖರೀದಿ ಕ್ರಿಮಿನಲ್ ಅಪರಾಧ: ಭಾರತೀಯ ಕಿಸಾನ್ ಸಂಘ

Update: 2020-12-04 15:57 GMT

ಹೊಸದಿಲ್ಲಿ, ಡಿ. 4: ರೈತರ ಪ್ರತಿಭಟನೆ ಬಗ್ಗೆ ಶುಕ್ರವಾರ ಮೌನ ಮುರಿದಿರುವ ಆರೆಸ್ಸೆಸ್ ನ ಅಂಗ ಸಂಸ್ಥೆ ಭಾರತೀಯ ಕಿಸಾನ್ ಸಂಘ (ಬಿಕೆಎಸ್), ಸರಕಾರಿ ಹಾಗೂ ಖಾಸಗಿ ಮಾರುಕಟ್ಟೆಗಳಲ್ಲಿ ಕನಿಷ್ಠ ಬೆಂಬಲ ಬೆಲೆ ಖಾತರಿ ನೀಡುವುದಕ್ಕೆ ಒಲವು ವ್ಯಕ್ತಪಡಿಸಿದೆ. ಅಲ್ಲದೆ, ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಆಹಾರ ಧಾನ್ಯಗಳನ್ನು ಖರೀದಿಸುವುದು ಕ್ರಿಮಿನಲ್ ಅಪರಾಧ ಎಂದು ಹೇಳಿದೆ.

‘‘ರೈತರು ತಮ್ಮ ಕೃಷ್ಯುತ್ಪನ್ನವನ್ನು ಎಲ್ಲಿ ಮಾರುತ್ತಾರೆ ಎಂಬುದು ಮುಖ್ಯವಲ್ಲ. ಅವರು ಖಾಸಗಿ ಮಾರುಕಟ್ಟೆ ಅಥವಾ ಎಪಿಎಂಸಿ ಅಥವಾ ರಸ್ತೆಗಳಲ್ಲಿ ಮಾರಾಟ ಮಾಡಲಿ. ನಮ್ಮ ಉದ್ದೇಶ ರೈತರಿಗೆ ಯಾವಾಗಲೂ ಕನಿಷ್ಠ ಬೆಂಬಲ ಬೆಲೆ ದೊರೆಯಬೇಕು ಎಂಬುದು. ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸುವುದು ಕ್ರಿಮಿನಲ್ ಅಪರಾಧ’’ ಎಂದು ಬಿಕೆಎಸ್‌ನ ಪ್ರಧಾನ ಕಾರ್ಯದರ್ಶಿ ಬದ್ರಿ ನಾರಾಯಣ ಚೌಧರಿ ಶುಕ್ರವಾರ ಹೇಳಿದ್ದಾರೆ. ‘‘ಮೂರು ಕೃಷಿ ಮಸೂದೆಯನ್ನು ಮಂಜೂರು ಮಾಡಿದ ಬಳಿಕ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ಪ್ರಾರಂಭಿಸಿರುವ ಮೊದಲ ರೈತರ ಒಕ್ಕೂಟ ಬಿಕೆಎಸ್. ದೇಶಾದ್ಯಂತ ಸುಮಾರು 3 ಸಾವಿರ ತಾಲೂಕುಗಳಲ್ಲಿ ಬಿಕೆಎಸ್ ಪ್ರತಿಭಟನೆ ಆಯೋಜಿಸಿದೆ. ಕೃಷಿ ಮಸೂದೆಗೆ ಸಂಬಂಧಿಸಿ 20 ಸಾವಿರ ಗ್ರಾಮ ಸಮಿತಿಗಳ ಮೂಲಕ ರೈತರೊಂದಿಗೆ ಸಮಾಲೋಚನೆ ನಡೆಸಿದೆ’’ ಎಂದು ಚೌಧರಿ ಹೇಳಿದ್ದಾರೆ.

ಆದರೆ, ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುತ್ತಿರುವುದರಿಂದ ಇದರಿಂದ ದೂರ ಉಳಿಯಲು ಬಿಕೆಎಸ್ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ. ‘‘ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಖಾತರಿ ನೀಡಲು ಬಿಕೆಎಸ್ ಶ್ರಮಿಸುತ್ತಿದೆ. ರೈತರಿಗಾಗಿ ಕಾರ್ಯನಿರ್ವಹಿಸಿದ 40 ವರ್ಷದ ಚರಿತ್ರೆ ಬಿಕೆಎಸ್‌ಗೆ ಇದೆ. ಆದರೆ, ನಾವು ಯಾವತ್ತೂ ಚಳವಳಿಯನ್ನು ಅಹಿಂಸಾತ್ಮಕವಾಗಿ ನಡೆಸುತ್ತೇವೆ. ಆದುದರಿಂದ ನಾವು ಕೆಲವು ಗುರಿಗಳನ್ನು ತಲುಪಲು ನಮ್ಮದೇ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತೇವೆ’’ ಎಂದು ಚೌಧರಿ ಹೇಳಿದ್ದಾರೆ. ಬಿಕೆಎಸ್ ಹಾಗೂ ಸರಕಾರದ ನಡುವಿನ ಮಾತುಕತೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಚೌಧರಿ, ಕೃಷಿ ಮಸೂದೆಗಳನ್ನು ಪರಿಚಯಿಸುವ ಮುನ್ನ ಕೇಂದ್ರ ಸರಕಾರ ನಮ್ಮೊಂದಿಗೆ ಸಮಾಲೋಚನೆ ನಡೆಸಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News