ಮಂಗಳೂರು : ಎಚ್‌ಐಎಫ್‌ನ ಆಡಿಟೋರಿಯಂ ಲೋಕಾರ್ಪಣೆ

Update: 2020-12-05 02:40 GMT

ಮಂಗಳೂರು, ಡಿ.4: ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ಇಂಡಿಯಾ (ಎಚ್‌ಐಎಫ್) ಅಧೀನದಲ್ಲಿ ಮಸ್ಜಿದುಲ್ ಇಹ್ಸಾನ್ ‌ನ ಎರಡನೇ ಮಹಡಿಯಲ್ಲಿ ಎಚ್‌ಐಎಫ್ ಆಡಿಟೋರಿಯಂನ್ನು ಶುಕ್ರವಾರ ಸಂಜೆ ಲೋಕಾರ್ಪಣೆಗೊಳಿಸಲಾಯಿತು. ಇದೇ ಸಂದರ್ಭ ‘ಪ್ರವಾದಿ ಮುಹಮ್ಮದ್‌ರ ಸಂದೇಶ’ ಕುರಿತ ಸೀರತ್ ಅಭಿಯಾನ ಸಮಾರೋಪಗೊಂಡಿತು.

ಮಸ್ಜಿದುಲ್ ಇಹ್ಸಾನ್ ‌ನ ಮೌಲಾನ ತ್ವಾಯಿಬ್ ದುಆಗೈಯುವುದರ ಮೂಲಕ ನೂತನ ಎಚ್‌ಐಎಫ್ ಆಡಿಟೋರಿಯಂನ್ನು ಲೋಕಾರ್ಪಣೆ ಗೊಳಿಸಿ, ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ಪ್ರವಾದಿ ಮುಹಮ್ಮದ್‌ರ ವಿರುದ್ಧ ವಿಶ್ವಾದ್ಯಂತ ಅಪಪ್ರಚಾರ ನಡೆಸುವ ಪ್ರಯತ್ನಗಳು ವ್ಯಾಪಕವಾಗಿ, ವ್ಯವಸ್ಥಿತವಾಗಿ ನಡೆಯುತ್ತಿವೆ. ಇದಕ್ಕೆ ಆಡಳಿತಗಳು ಕೂಡ ಬೆಂಬಲ ಸೂಚಿಸುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರವಾದಿಯವರ ತತ್ವಗಳನ್ನು ಸಂಪೂರ್ಣ ಪರಿಚಯಿಸುವ ಅಗತ್ಯವಿದೆ ಎಂದರು.

ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಎಚ್‌ಐಎಫ್‌ನ ಅಧ್ಯಕ್ಷ ಸಾಜಿದ್ ಎ.ಕೆ., ಎಚ್‌ಐಎಫ್ ಆಡಿಟೋರಿಯಂನ್ನು ಸಮುದಾಯ ಕ್ಕಾಗಿ ಸದುಪಯೋಗಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಪ್ರತಿ ತಿಂಗಳು ವಿದ್ಯಾರ್ಥಿಗಳಿಗಾಗಿ ಕೌನ್ಸೆಲಿಂಗ್‌ನ್ನು ನಡೆಸಲಾಗುವುದು. ಜಿಲ್ಲೆಯ ಎಲ್ಲ ಮಸೀದಿಗಳ ಇಮಾಮ್‌ಗಳಿಗೆ ಉಚಿತವಾಗಿ ಕೌನ್ಸೆಲಿಂಗ್ ಆಯೋಜಿಸಲಾಗುತ್ತದೆ. ಆಡಿಟೋರಿಯಂನಲ್ಲಿ ಧಾರ್ಮಿಕ, ಸಾಮುದಾಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಕಳೆದ ಎಂಟು ವರ್ಷಗಳಿಂದ ಸೀರಾತ್ ಅಭಿಯಾನದ ಸಮಾರೋಪ ಕಾರ್ಯಕ್ರಮವನ್ನು ನಗರದ ಪುರಭವನದಲ್ಲಿ ಆಯೋಜಿಸುತ್ತಾ ಬರಲಾಗಿತ್ತು. ಕೋವಿಡ್ ಕಾರಣದಿಂದಾಗಿ ಸರಕಾರದ ನಿರ್ದೇಶನ ಪಾಲಿಸುವ ಹಿನ್ನೆಲೆಯಲ್ಲಿ ಈ ಬಾರಿ ನೂತನ ಎಚ್‌ಐಎಫ್ ಆಡಿಟೋರಿಯಂ ನಲ್ಲೇ ಸೀರಾತ್ ಅಭಿಯಾನದ ಸಮಾರೋಪ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹೈಲ್ಯಾಂಡ್ ಎಜುಕೇಶನ್ ಆ್ಯಂಡ್ ಕಲ್ಚರಲ್ ಸೆಂಟರ್‌ನ (ಎಚ್‌ಇಸಿಸಿ) ಅಧ್ಯಕ್ಷ ಮುಹಮ್ಮದ್ ಅರಬಿ, ಎಚ್‌ಇಸಿಸಿ ಸಂಸ್ಥಾಪಕ ಅಧ್ಯಕ್ಷ ಅಹ್ಮದ್ ಎ.ಕೆ., ಮಾಜಿ ಅಧ್ಯಕ್ಷ ಹಾಗೂ ಡೆಲ್ಟಾ ಚೇರ್‌ಮನ್ ಮೊಯ್ದೀನ್ ಕುಂಞಿ ಮತ್ತಿತರರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಎಚ್‌ಐಎಫ್‌ನ ಅಧ್ಯಕ್ಷ ಸಾಜಿದ್ ಎ.ಕೆ. ಸ್ವಾಗತಿಸಿದರು. ಮೆಹಫೂಝ್ ಕಿರಾಅತ್ ಪಠಿಸಿದರು. ಎಚ್‌ಎಫ್‌ನ ಖಜಾಂಚಿ ರಿಝ್ವಾನ್ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News