ಬೋಗೋಡಿ ಆಟೋ ಗ್ಯಾಸ್ ಪಂಪ್ ನಿರ್ಮಾಣದ ಬಗ್ಗೆ ಜಾಗೃತಿ ಸಭೆ: ಕಾಮಗಾರಿ ನಿಲ್ಲಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ

Update: 2020-12-04 16:00 GMT

ಬಂಟ್ವಾಳ, ಡಿ.4: ಇಲ್ಲಿನ ಮೆಲ್ಕಾರ್ ಸಮೀಪದ ಬೋಗೋಡಿ ಗುಡ್ಡೆಅಂಗಡಿಯ ಜನವಸತಿ ಪ್ರದೇಶದಲ್ಲಿ ಆಟೋ ಗ್ಯಾಸ್ ಪಂಪ್ ನಿರ್ಮಾಣ ದಿಂದ ಆಗುವ ದುಷ್ಪರಿಣಾಮದ ಬಗ್ಗೆ ಊರಿನ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಶುಕ್ರವಾರ ಬೋಗೋಡಿ ಜುಮಾ ಮಸೀದಿ ಎದುರು ಜುಮಾ ನಮಾಝ್ ನ ಬಳಿಕ ನಡೆಯಿತು‌. 

ಈ ಸಂದರ್ಭದಲ್ಲಿ ಮಾತನಾಡಿದ ಗುಡ್ಡೆ ಅಂಗಡಿ ಆಟೋ ಗ್ಯಾಸ್ ಪಂಪ್ ವಿರೋಧಿ ಹೋರಾಟ ಸಮಿತಿಯ ಪದಾಧಿಕಾರಿಗಳು, ಆಟೋ ಗ್ಯಾಸ್ ಪಂಪ್ ನಿರ್ಮಾಣಕ್ಕೆ ಹತ್ತು ಹಲವು ಷರತುಗಳು ಇವೆ. ಜನವಸತಿ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಗ್ಯಾಸ್ ಪಂಪ್ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂಬ ನಿಯಮ ಇದೆ. ಗುಡ್ಡೆಅಂಗಡಿ ಜನವಸತಿ ಪ್ರದೇಶವಾಗಿದ್ದರೂ ಗ್ಯಾಸ್ ಪಂಪ್ ನಿರ್ಮಾಣಕ್ಕೆ ಅಧಿಕಾರಿಗಳು ಅನುಮತಿ ನೀಡಿರುವುದು ಆತಂಕವನ್ನು ಉಂಟು ಮಾಡಿದೆ ಎಂದು ಹೇಳಿದರು.

ಮೆಲ್ಕಾರ್ - ಮುಡಿಪು ರಸ್ತೆಯ ಬೋಗೋಡಿ ಗುಡ್ಡೆಅಂಗಡಿ ಎಂಬಲ್ಲಿ ಕಲ್ಲಡ್ಕ ಮೂಲದ ಅಬ್ದುಲ್ಲಾ ಎಂಬವರ ಜಾಗದಲ್ಲಿ ಬಾಡಿಗೆ ಆಧಾರದಲ್ಲಿ ತಮಿಳುನಾಡು ಮೂಲದ ತೆನ್ ಪಾಂಡ್ಯನ್ ಹೆಸರಿನ ಆಟೋ ಗ್ಯಾಸ್ ಕಂಪೆನಿಯು ಆಟೋ ಗ್ಯಾಸ್ ಪಂಪ್ ನಿರ್ಮಿಸುತ್ತಿದೆ. ಪಂಪ್ ಗೆ ಸಮೀಪದಲ್ಲೇ ಹಲವು ಮನೆಗಳಿವೆ. ಮುಂದಿನ ದಿನಗಳಲ್ಲಿ ಯಾವುದಾದರೂ ಅನಾಹುತ ಸಂಭವಿಸಿದರೆ ಕಂಪೆನಿಯವರು ಊರು ಬಿಟ್ಟು ಹೋಗ ಬಹುದು. ಅನುಮತಿ ನೀಡಿದ ಅಧಿಕಾರಿಗಳು ವರ್ಗಾವಣೆಗೊಂಡಿರುತ್ತಾರೆ. ಸಂತ್ರಸ್ತರಾಗುವವರು ನ್ಯಾಯಕ್ಕಾಗಿ ಯಾರ ಬಳಿಗೆ ಹೋಗಬೇಕು ಎಂದು ಎಚ್ಚರಿಸಿದರು.

ಆರಂಭದಲ್ಲಿ ಇಲ್ಲಿ ಗ್ಯಾಸ್ ಪಂಪ್ ನಿರ್ಮಾಣ ಆಗುತ್ತಿದೆ ಎಂಬ ಮಾಹಿತಿ ಯಾರಿಗೂ ಇರಲಿಲ್ಲ. ವಿಷಯ ತಿಳಿದ ಬಳಿಕ ಸ್ಥಳೀಯ ನಾಗರಿಕರು ಒಟ್ಟು ಆಟೋ ಗ್ಯಾಸ್ ಪಂಪ್ ನಿರ್ಮಾಣ ವಿರೋಧಿ ಹೋರಾಟ ಸಮಿತಿಯನ್ನು ರಚಿಸಿ ಅಧಿಕಾರಿಗಳ ಬಳಿ ತೆರಳಿದಾಗ ಆ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದರು. ಬಳಿಕ ಮಾಹಿತಿ ಹಕ್ಕಿನಡಿ ವಿವರ ಕೋರಿದಾಗ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಸಹಿ ಹಾಕಿ ಅನುಮತಿ ನೀಡಿದ್ದಾರೆ. ಇದರ ಹಿಂದೆ ಭ್ರಷ್ಟಾಚಾರದ ಶಂಕೆ ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಗ್ಯಾಸ್ ಪಂಪ್ ನಿರ್ಮಾಣಕ್ಕೆ ಸ್ಥಳೀಯರ ವಿರೋಧ ಇಲ್ಲ ಎಂದು ನಿರಪೇಕ್ಷ ಪತ್ರ ನೀಡಲಾಗಿದೆ. ಆದರೆ ಇಲ್ಲಿ ಗ್ಯಾಸ್ ಪಂಪ್ ನಿರ್ಮಾಣ ಆಗುತ್ತಿದೆ ಎಂಬ ಮಾಹಿತಿಯೇ ಸ್ಥಳೀಯರಿಗೆ ಇರಲಿಲ್ಲ. ಪ್ರಸಕ್ತ ಗ್ಯಾಸ್ ಪಂಪ್ ನಿರ್ಮಾಣಕ್ಕೆ ಇಡೀ ಊರಿನ ಜನರ ವಿರೋಧ ಇದೆ. ಅಧಿಕಾರಿಗಳು ಸರ್ವೇ ನಡೆಸಿರುವುದಾಗಿ ಸುಳ್ಳು ವರದಿ ಸಿದ್ಧಪಡಿಸಿ ನಿರಪೇಕ್ಷ ಪತ್ರ ನೀಡಿದ್ದಾರೆ. ಅಧಿಕಾರಿಗಳ ಈ ನಡೆ ಹಲವು ಸಂಶಯಕ್ಕೆ ಕಾರಣವಾಗಿದೆ ಎಂದು ಪದಾಧಿಕಾರಿಗಳು ಆರೋಪಿಸಿದರು.

ಗ್ಯಾಸ್ ಪಂಪ್ ಕಾಮಗಾರಿಯನ್ನು ತಡೆಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೂ ಕಾಮಗಾರಿ ನಿಂತಿಲ್ಲ. ಸೋಮವಾರದಿಂದ ಕಾಮಗಾರಿ ನಿಲ್ಲಿಸದಿದ್ದರೆ ಊರಿನ ಜನರು ಒಟ್ಟು ಸೇರಿ ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ರಝಾಕ್ ಬೋಗೋಡಿ, ಶಿಹಾಬ್ ಬೋಗೋಡಿ, ಹನೀಫ್, ನಾಸಿರ್, ಹಸೈನಾರ್, ಶಾಕಿರ್, ಮೊಯ್ದೀನ್, ಸಲ್ಮಾನ್ ಫಾರಿಶ್, ರಿಝ್ವಾನ್, ಶಾನವಾಝ್, ಸಫ್ವಾನ್, ಅನೀಸ್, ಊರಿನ ಹಿರಿಯರು, ಯುವಕರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News