ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: ಟಿಆರ್‌ಎಸ್ ಅತಿ ದೊಡ್ಡ ಪಕ್ಷ; ಬಿಜೆಪಿ ಭರ್ಜರಿ ಸಾಧನೆ

Update: 2020-12-04 17:15 GMT

ಹೈದರಾಬಾದ್,ಡಿ.4: ಇಡೀ ದೇಶದ ಕುತೂಹಲ ಕೆರಳಿಸಿದ್ದ ಬೃಹತ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯ ಮತಗಳ ಎಣಿಕೆ ಶುಕ್ರವಾರ ನಡೆದಿದ್ದು, ಒಟ್ಟು 150 ಸ್ಥಾನಗಳ ಪೈಕಿ ತೆಲಂಗಾಣ ರಾಷ್ಟ್ರೀಯ ಸಮಿತಿಯು 56 ಸ್ಥಾನಗಳನ್ನು ಜಯಗಳಿಸಿ,ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಬಿರುಸಿನ ಚುನಾವಣಾ ಪ್ರಚಾರ ನಡೆಸಿದ್ದ ಬಿಜೆಪಿ ಉತ್ತಮ ಸಾಧನೆಯನ್ನು ಪ್ರದರ್ಶಿಸಿದ್ದು, 49 ಸ್ಥಾನಗಳಲ್ಲಿ ಜಯಗಳಿಸಿದೆ. ಅಸದುದ್ದೀನ್ ಉವೈಸಿ ನೇತೃತ್ವದ ಎಐಎಂಐಎಂ ಪಕ್ಷವು ಹಳೆ ಹೈದರಾಬಾದ್ ಪ್ರದೇಶಗಳಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಂಡಿದ್ದು, 43 ಸ್ಥಾನಗಳನ್ನು ಗೆಲ್ಲುವಲ್ಲಿ ಸಫಲವಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳೀಪಟಗೊಂಡಿದ್ದು, ಅದರ ಇಬ್ಬರು ಅಭ್ಯರ್ಥಿಗಳು ಮಾತ್ರವೇ ಗೆಲುವು ಕಂಡಿದ್ದಾರೆ. ತೆಲುಗುದೇಶಂ ಪಕ್ಷ ಕೂಡಾ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತಾದರೂ, ಒಂದೇ ಒಂದು ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ.

ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್‌ಎಂಸಿ)ಗೆ ಡಿಸೆಂಬರ್ 1ರಂದು ಶೇ. 46.55ರಷ್ಟು ಮತದಾನವಾಗಿತ್ತು. 74.67 ಲಕ್ಷ ಮತದಾರರ ಪೈಕಿ 34.50 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

2016ರ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕೇವಲ ನಾಲ್ಕು ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಈ ಸಲದ ಚುನಾವಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಉ.ಪ್ರ.ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತಿತರ ಬಿಜೆಪಿಯ ರಾಷ್ಟ್ರೀಯ ನಾಯಕರು ಬಿರುಸಿನ ಚುನಾವಣಾ ಪ್ರಚಾರ ನಡೆಸಿದ್ದರು. ಈ ಚುನಾವಣೆಯನ್ನು ಬಿಜೆಪಿ ಪ್ರತಿಷ್ಟೆಯ ಪ್ರಶ್ನೆಯಾಗಿ ಪರಿಗಣಿಸಿತ್ತು.

2016ರ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕೆ.ಚಂದ್ರಶೇಖರ ರಾವ್ ನೇತೃತ್ವದ ಟಿಆರ್‌ಎಸ್ ಪಕ್ಷವು 150 ವಾರ್ಡ್‌ಗಳ ಪೈಕಿ 99ರಲ್ಲಿ ಗೆದ್ದು, ಪ್ರಚಂಡ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.

ಕಳೆದ ತಿಂಗಳು ಹೈದರಾಬಾದ್ ಮಹಾನಗರ ಪಾಲಿಕೆ ವ್ಯಾಪ್ತಿಯ ದುಬ್ಬಾಕ್ ವಿಧಾನಸಭಾ ಕ್ಥೇತ್ರದ ಉಪಚುನಾವಣೆಯಲ್ಲಿಯೂ ಬಿಜೆಪಿ ಜಯಗಳಿಸಿತ್ತು.

ಆಡಳಿತಾರೂಢ ಟಿಆರ್‌ಎಸ್ ಎಲ್ಲಾ 150 ವಾರ್ಡ್‌ಗಳಲ್ಲಿ ಹಾಗೂ ಬಿಜೆಪಿ 149 ಸ್ಥಾನಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು.

ಕಾಂಗ್ರೆಸ್, ಎಐಎಂಐಎಂ ಹಾಗೂ ಟಿಡಿಪಿ ಕ್ರಮವಾಗಿ 146, 51 ಹಾಗೂ 106 ವಾರ್ಡ್‌ಗಳಲ್ಲಿ ಸ್ಪರ್ಧಿಸಿದ್ದವು.

ಒಟ್ಟು ಸ್ಥಾನಗಳು 150

      ಟಿಆರ್‌ಎಸ್ -56

      ಬಿಜೆಪಿ- 49

      ಎಐಎಂಐಎಂ- 43

      ಕಾಂಗ್ರೆಸ್- 2

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News