ಜಿಪಿಎಸ್ ರಹಿತ ಬಸ್‌ಗಳ ಲೈಸೆನ್ಸ್ ರದ್ದು : ಸಾರಿಗೆ ಪ್ರಾಧಿಕಾರಿಗಳ ಸಭೆಯಲ್ಲಿ ಡಿಸಿ ರಾಜೇಂದ್ರ ಸೂಚನೆ

Update: 2020-12-04 16:26 GMT

ಮಂಗಳೂರು, ಡಿ.4: ಮಂಗಳೂರು ನಗರದಲ್ಲಿ ಸಂಚರಿಸುವ ಸಿಟಿ ಬಸ್‌ಗಳಲ್ಲಿ ಜಿಪಿಎಸ್ ಅಳವಡಿಸದಿದ್ದಲ್ಲಿ ಬಸ್‌ನ ಲೈಸೆನ್ಸ್‌ನ್ನು ರದ್ದುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಖಚಕ್ ಸೂಚನೆ ರವಾನಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ಸಾರಿಗೆ ಪ್ರಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಯಾಣಿಕರ ಸುರಕ್ಷತೆ ದೃಷ್ಟಿಯಲ್ಲಿ ಸಿಟಿ ಬಸ್‌ಗಳಲ್ಲಿ ಜಿಪಿಎಸ್ ಅಳವಡಿಕೆ ಕಡ್ಡಾಯವಾಗಿದೆ. ಮುಂದಿನ 15 ದಿನಗಳೊಳಗಾಗಿ ಜಿಪಿಎಸ್ ಅಳವಡಿಸುವ ಕಾರ್ಯವಾಗಬೇಕು. ಈಗಾಗಲೇ ಅನೇಕ ಬಾರಿ ಸೂಚನೆ ನೀಡಲಾಗಿದೆ. ಒಂದು ವೇಳೆ ನಿಯಮ ಮೀರಿದರೆ ಬಸ್ ಪರವಾನಿಗೆ ಯನ್ನು ನಿರ್ದಾಕ್ಷಿಣ್ಯವಾಗಿ ರದ್ದುಗೊಳಿಸುತ್ತೇವೆ ಎಂದು ಪುನರುಚ್ಚರಿಸಿದರು.

ಮಂಗಳೂರು ನಗರ ವ್ಯಾಪ್ತಿಯಲ್ಲಿ 320 ಬಸ್‌ಗಳಿವೆ. ಈ ಪೈಕಿ 70 ಬಸ್‌ಗಳಲ್ಲಿ ಮಾತ್ರ ಜಿಪಿಎಸ್ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ, ಜಪಿಎಸ್ ಅಳವಡಿಸುವ ಕುರಿತು ಈಗಾಗಲೇ ಬಸ್ ಮಾಲಕರಿಗೆ ಮಾಹಿತಿ ನೀಡಲಾಗಿದೆ ಎಂದರು.

ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಕೆಲವು ಪ್ರಮುಖರು ಮಾತನಾಡಿ, ಸ್ಮಾರ್ಟ್‌ಸಿಟಿ ಕಾಮಗಾರಿಯ ವೇಳೆ ಎತ್ತಂಗಡಿಯಾಗಿರುವ ಆಟೋ ರಿಕ್ಷಾ ಪಾರ್ಕ್‌ಗಳ ಅಭಿವೃದ್ಧಿ ಹಾಗೂ ಈಗಾಗಲೇ ಬೇಡಿಕೆ ಇರುವ ರಿಕ್ಷಾ ಪಾರ್ಕ್‌ಗಳ ನೋಂದಣಿ ಕುರಿತು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಭೆಯಲ್ಲಿ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಗರ ಸಂಚಾರ ಪೊಲೀಸ್ ಎಸಿಪಿ ನಟರಾಜ್, ನಗರದಲ್ಲಿ 210 ಆಟೋ ನಿಲ್ದಾಣಗಳನ್ನು ಗುರುತಿಸಲಾಗಿದೆ. ಈ ಕುರಿತು ಮುಂದಿನ ದಿನಗಳಲ್ಲಿ ಪರಿಶೀಲನೆ ಮಾಡಿ ವರದಿ ನೀಡುತ್ತೇವೆ ಎಂದರು.

ಸಭೆಯಲ್ಲಿ ಮಂಗಳೂರು ಆರ್‌ಟಿಒ ವರ್ಣೇಕರ್, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀ ಪ್ರಸಾದ್, ಮಹಾನಗರ ಪಾಲಿಕೆ ಉಪ ಆಯುಕ್ತ ಸಂತೋಷ್ ಕುಮಾರ್, ಸಂಚಾರ ಪೊಲೀಸ್ ಎಸಿಪಿ ನಟರಾಜ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News