ಉದ್ಯೋಗಾಧಾರಿತ ವಲಸೆ ವೀಸಾಗಳ ಮಿತಿ ರದ್ದುಪಡಿಸಿದ ಅಮೆರಿಕ ಸೆನೆಟ್

Update: 2020-12-04 18:16 GMT

ವಾಶಿಂಗ್ಟನ್, ಡಿ. 4: ಉದ್ಯೋಗಾಧಾರಿತ ವಲಸೆ ವೀಸಾಗಳ ದೇಶವಾರು ಮಿತಿಯನ್ನು ರದ್ದುಪಡಿಸುವ ಹಾಗೂ ಕುಟುಂಬ ಆಧಾರಿತ ವೀಸಾಗಳ ದೇಶವಾರು ಮಿತಿಯನ್ನು ಏರಿಸುವ ಮಸೂದೆಯೊಂದನ್ನು ಅಮೆರಿಕದ ಸೆನೆಟ್ ಗುರುವಾರ ಅವಿರೋಧವಾಗಿ ಅಂಗೀಕರಿಸಿದೆ.

ಈ ಮಸೂದೆಯು, ಅಮೆರಿಕದಲ್ಲಿ ಖಾಯಂ ಆಗಿ ವಾಸಿಸಲು ಅವಕಾಶ ನೀಡುವ ಗ್ರೀನ್ ಕಾರ್ಡ್‌ಗಳನ್ನು ಪಡೆಯಲು ವರ್ಷಗಳಿಂದ ಕಾಯುತ್ತಿರುವ ಲಕ್ಷಾಂತರ ಭಾರತೀಯರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ.

ಎಚ್-1ಬಿ ವೀಸಾದ ಆಧಾರದಲ್ಲಿ ಕೆಲಸಕ್ಕಾಗಿ ಅಮೆರಿಕಕ್ಕೆ ಬಂದಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳು ಗ್ರೀನ್ ಕಾರ್ಡ್‌ಗಾಗಿ ದಶಕಗಳಿಂದಲೂ ಕಾಯುತ್ತಿದ್ದಾರೆ. ಅಂಥವರು ಈಗ ‘ಫೇರ್‌ನೆಸ್ ಫಾರ್ ಹೈ ಸ್ಕಿಲ್ಡ್ ಇಮಿಗ್ರಾಂಟ್ಸ್ ಆ್ಯಕ್ಟ್’ ಮಸೂದೆಯಿಂದಾಗಿ ಅತ್ಯಂತ ನಿರಾಳರಾಗಿದ್ದಾರೆ.

ಈ ಮಸೂದೆಯನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ 2019 ಜುಲೈ 10ರಂದೇ 365-65 ಮತಗಳ ಅಂತರದಿಂದ ಅಂಗೀಕರಿಸಿತ್ತು.

ಈ ಮಸೂದೆಯು ಕುಟುಂಬ ಆಧಾರಿತ ವೀಸಾಗಳ ಮೇಲಿನ ಮಿತಿಯನ್ನು ಆ ವರ್ಷ ಲಭ್ಯವಿರುವ ಇಂಥ ವೀಸಾಗಳ ಒಟ್ಟು ಸಂಖ್ಯೆಯ 7 ಶೇಕಡದಿಂದ 15 ಶೇಕಡಕ್ಕೆ ಏರಿಸಿದೆ.

ಉದ್ಯೋಗಾಧಾರಿತ ವಲಸೆ ವೀಸಾಗಳ ಮೇಲಿನ 7 ಶೇಕಡ ದೇಶವಾರು ಮಿತಿಯನ್ನು ಮಸೂದೆಯು ರದ್ದುಪಡಿಸುತ್ತದೆ. ಇದು ಅಮೆರಿಕದಲ್ಲಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳು ಶೀಘ್ರದಲ್ಲಿ ಗ್ರೀನ್‌ಕಾರ್ಡ್‌ಗಳನ್ನು ಪಡೆಯಲು ಅವಕಾಶ ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News