ತನ್ನದೇ ಮರಣ ಪ್ರಮಾಣಪತ್ರ ನೀಡಿ 23 ಕೋಟಿ ರೂ. ಜೀವವಿಮೆ ಕ್ಲೇಮ್ ಪಡೆದ ಮಹಿಳೆ!

Update: 2020-12-05 03:48 GMT

ಕರಾಚಿ, ಡಿ.5: ಮಹಿಳೆಯೊಬ್ಬಳು ತನ್ನದೇ ಸುಳ್ಳು ಮರಣ ಪ್ರಮಾಣಪತ್ರ ಪಡೆದು ಜೀವವಿಮಾ ಕಂಪೆನಿಗೆ ಸಲ್ಲಿಸಿ 15 ಲಕ್ಷ ಡಾಲರ್ ವಿಮಾ ಮೊತ್ತವನ್ನು ಕ್ಲೇಮ್ ಮಾಡಿಕೊಂಡ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪಾಕಿಸ್ತಾನದ ಫೆಡರಲ್ ಇನ್‌ವೆಸ್ಟಿಗೇಟಿಂಗ್ ಏಜೆನ್ಸಿ (ಎಫ್‌ಐಎ) ಪ್ರಕಾರ, ಸೀಮಾ ಖಾರ್ಬೆ ಎಂಬ ಮಹಿಳೆ 2008 ಮತ್ತು 2009ರಲ್ಲಿ ಅಮೆರಿಕಗೆ ಪ್ರವಾಸ ಹೋಗಿದ್ದಳು. ಆಗ ತನ್ನ ಹೆಸರಿನಲ್ಲಿ ದೊಡ್ಡ ಮೊತ್ತದ ಎರಡು ಜೀವವಿಮಾ ಪಾಲಿಸಿ ಮಾಡಿಸಿದ್ದಳು. 2011ರಲ್ಲಿ ಒಬ್ಬ ವೈದ್ಯ ಸೇರಿದಂತೆ ಸ್ಥಳೀಯ ಸರಕಾರಿ ಅಧಿಕಾರಿಗಳಿಗೆ ಲಂಚ ನೀಡಿ, ತನ್ನ ಹೆಸರಿನಲ್ಲಿ ಮರಣ ಪ್ರಮಾಣಪತ್ರ ಪಡೆದಳು. ಆಕೆಯ ಮೃತದೇಹವನ್ನು ಹೂತು ಹಾಕಿದ್ದಾಗಿಯೂ ದಾಖಲೆ ಸೃಷ್ಟಿಸಲಾಯಿತು ಎಂದು ಎಫ್‌ಐಎ ವಿವರ ನೀಡಿದೆ.

ಈ ಪ್ರಮಾಣಪತ್ರವನ್ನು ಆಕೆಯ ಮಕ್ಕಳು ಬಳಸಿಕೊಂಡು ಎರಡು ಜೀವವಿಮಾ ಪಾಲಿಸಿಗಳ ಮೊತ್ತವಾದ 23 ಕೋಟಿ ಪಾಕಿಸ್ತಾನಿ ರೂಪಾಯಿಯನ್ನು ಪಡೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮೃತಪಟ್ಟಿದ್ದಾಗಿ ಘೋಷಿಸಲ್ಪಟ್ಟ ಖಾರ್ಬೆ ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕನಿಷ್ಠ 10 ಬಾರಿ ವಿದೇಶ ಪ್ರಯಾಣ ಬೆಳೆಸಿದ್ದಾಳೆ. ಯಾವ ಏರ್‌ಲೈನ್ಸ್ ಕೂಡಾ ಈ ವಂಚನೆಯನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಐದು ದೇಶಗಳಿಗೆ ಭೇಟಿ ನೀಡಿದ್ದ ಈ ಮಹಿಳೆ ಪ್ರತಿ ಬಾರಿಯೂ ವಾಪಸ್ಸಾಗಿದ್ದಾಳೆ ಎಂದು ವಿವರಿಸಿದ್ದಾರೆ.

ಎಫ್‌ಐಎ ಮಾನವ ಕಳ್ಳಸಾಗಣೆ ವಿಭಾಗ ಇದೀಗ ಮಹಿಳೆ, ಆಕೆಯ ಪುತ್ರ ಹಾಗೂ ಪುತ್ರಿ, ಸುಳ್ಳು ದಾಖಲೆ ನೀಡಿದ ವೈದ್ಯನ ವಿರುದ್ಧ ಅಪರಾಧ ಪ್ರಕರಣಗಳನ್ನು ದಾಖಲಿಸಿದೆ. ಅಮೆರಿಕದ ಅಧಿಕಾರಿಗಳು ಈ ವಂಚನೆಯ ಬಗ್ಗೆ ಮಾಹಿತಿ ನೀಡಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News