ಪ್ರತಿಭಟನಾನಿರತ ರೈತರಿಗೆ ಬೆಂಬಲ: ಪ್ರಶಸ್ತಿ ವಾಪಸಾತಿಗೆ ಮೂವರು ಬಾಕ್ಸರ್ ಗಳ ನಿರ್ಧಾರ
ಚಂಡಿಗಢ: ನೂತನ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ನೀಡುವ ಸಲುವಾಗಿ ತಮ್ಮ ಸಾಧನೆಗೆ ಲಭಿಸಿರುವ ಪ್ರಶಸ್ತಿಯನ್ನು ವಾಪಸ್ ನೀಡುವುದಾಗಿ ಮೂವರು ಬಾಕ್ಸಿಂಗ್ ದಂತಕತೆಗಳಾದ ಗುರ್ಬಕ್ಸ್ ಸಿಂಗ್ ಸಂಧು, ಕೌರ್ ಸಿಂಗ್ ಹಾಗೂ ಜೈಪಾಲ್ ಸಿಂಗ್ ಶುಕ್ರವಾರ ಹೇಳಿದ್ದಾರೆ.
ಮಾಜಿ ರಾಷ್ಟ್ರೀಯ ಬಾಕ್ಸಿಂಗ್ ಕೋಚ್ ಆಗಿರುವ ಸಂಧು ಅವರ ಅವಧಿಯಲ್ಲಿ ಭಾರತವು ಚೊಚ್ಚಲ ಒಲಿಂಪಿಕ್ಸ್ ಪದಕ ಜಯಿಸಿತ್ತು. ಇವರಿಗೆ ದ್ರೋಣಾಚಾರ್ಯ ಪ್ರಶಸ್ತಿ ಲಭಿಸಿದೆ. ಮಾಜಿ ಏಶ್ಯನ್ ಗೇಮ್ಸ್(1982)ಚಾಂಪಿಯನ್ ಕೌರ್ ಸಿಂಗ್ ಪದ್ಮಶ್ರೀ ಹಾಗೂ ಅರ್ಜುನ ಪ್ರಶಸ್ತಿ ಪಡೆದಿದ್ದರು. 1996ರ ಏಶ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿರುವ ಜೈಪಾಲ್ ಸಿಂಗ್ ಕೂಡ ಅರ್ಜುನ ಪ್ರಶಸ್ತಿ ಪಡೆದಿದ್ದರು.
1982ರಲ್ಲಿ ಅರ್ಜುನ ಪ್ರಶಸ್ತಿ ಹಾಗೂ 1983ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಕೌರ್ ಸಿಂಗ್ ಶನಿವಾರ ಜಲಂಧರ್ ಗೆ ತೆರಳಿ ಮಾಜಿ ಕ್ರೀಡಾಳುಗಳನ್ನು ಸೇರಿಕೊಳ್ಳಲಿದ್ದಾರೆ. ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಇವರೆಲ್ಲರೂ ದಿಲ್ಲಿಗೆ ತೆರಳಿ ರಾಷ್ಟ್ರಪತಿ ರಾಮನಾಥ ಕೋವಿಂದ್ ರನ್ನು ಭೇಟಿಯಾಗಿ ಪದಕವನ್ನು ವಾಪಸ್ ನೀಡಲಿದ್ದಾರೆ. 1980ರಲ್ಲಿ ಹೊಸದಿಲ್ಲಿಯಲ್ಲಿ ನಡೆದ ಎಕ್ಸಿಬಿಶನ್ ಪಂದ್ಯದಲ್ಲಿ ಬಾಕ್ಸಿಂಗ್ ದಂತಕತೆ ಮುಹಮ್ಮದ್ ಅಲಿ ವಿರುದ್ದ ಹೋರಾಡಿದ್ದ 70ರ ಹರೆಯದ ಕೌರ್ ಸಿಂಗ್ ಗೆ ಪಂಜಾಬ್ ನ ಸಂಗ್ರೂರ್ ನಲ್ಲಿ 4 ಎಕರೆ ಜಮೀನಿದೆ. ಪ್ರತಿಭಟನಾನಿತರ ರೈತರ ಮೇಲೆ ಸರಕಾರದ ಕ್ರಮದಿಂದ ಮನಸ್ಸಿಗೆ ನೋವಾಗಿದೆ ಎಂದು ಅವರು ಹೇಳಿದ್ದಾರೆ.
ಮಹಿಳಾ ಬಾಕ್ಸರ್ ಗಳಿಗೆ ಮಾರ್ಗದರ್ಶನ ನೀಡುವ ಮೊದಲು ಎರಡು ದಶಕಗಳ ಕಾಲ ಗುರ್ಬಕ್ಸ್ ಸಿಂಗ್ ಸಂಧು ಭಾರತದ ರಾಷ್ಟ್ರೀಯ ಪುರುಷರ ತಂಡದ ಕೋಚ್ ಆಗಿದ್ದರು.
ತಮ್ಮ ಯೋಗಕ್ಷೇಮವನ್ನು ಲೆಕ್ಕಿಸದೆ ಭಾರೀ ಚಳಿಯ ನಡುವೆ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ನೀಡುವ ಉದ್ದೇಶದಿಂದ ತಾನು ದ್ರೋಣಾಚಾರ್ಯ ಪ್ರಶಸ್ತಿಯನ್ನು ವಾಪಸ್ ನೀಡುವೆ ಎಂದು ಸಂಧು ಹೇಳಿದ್ದಾರೆ.