ಕೊರೋನ ಭಯ ತೊರೆದು ಹೆಚ್ಚು ಕೇಸುಗಳ ವಿಲೇವಾರಿಗೆ ಪ್ರಯತ್ನಿಸಿ: ನ್ಯಾ.ಅಶೋಕ್ ಕಿನಗಿ

Update: 2020-12-05 11:38 GMT

ಉಡುಪಿ, ಡಿ. 5: ನ್ಯಾಯಾಧೀಶರು, ಸಿಬ್ಬಂದಿಗಳು, ಅಭಿಯೋಜಕರು, ವಕೀಲರು, ಪೊಲೀಸರು ಹಾಗೂ ಇತರ ಇಲಾಖೆಯವರು ಕೊರೋನ ಭಯ ವನ್ನು ತೊರೆದು ಹೆಚ್ಚಿನ ಸಂಖ್ಯೆಯ ಕೇಸುಗಳನ್ನು ವಿಲೇವಾರಿ ಮಾಡಬೇಕು ಎಂದು ರಾಜ್ಯ ಹೈಕೋರ್ಟ್ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ನ್ಯಾ. ಅಶೋಕ್ ಎಸ್.ಕಿನಗಿ ತಿಳಿಸಿದ್ದಾರೆ.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಉಡುಪಿ ಜಿಲ್ಲಾ ನ್ಯಾಯಾ ಲಯದ ಆವರಣಕ್ಕೆ ಇಂಟರ್‌ಲಾಕ್ ಆಳವಡಿಸಿದ ಕಾಮಗಾರಿಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕೊರೋನ ಭೀತಿಯ ಮಧ್ಯೆಯೂ ಕಳೆದ ಹಲವು ತಿಂಗಳಿನಿಂದ ಸಾಕಷ್ಟು ಕ್ರಿಮಿನಲ್ ಹಾಗೂ ಸಿವಿಲ್ ಪ್ರಕರಣಗಳನ್ನು ವರ್ಚುವಲ್ ಹಾಗೂ ವೀಡಿಯೊ ವಿಡಿಯೋ ಕಾನ್ಫರೆನ್ಸ್‌ಗಳ ಮೂಲಕ ವಿಲೇವಾರಿ ಮಾಡಲಾಗಿದೆ. ಜಿಲ್ಲೆಯ ವಕೀಲರ ಸಂಘವು ಹಲವು ಬೇಡಿಕೆಗಳನ್ನು ಸಲ್ಲಿಸಿದ್ದು, ಇದರಲ್ಲಿ ಕೆಲವು ಪ್ರಗತಿಯಲ್ಲಿದೆ. ಇವರ ಎಲ್ಲ ಬೇಡಿಕೆಗಳನ್ನು ಶೀಘ್ರವೇ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಉಡುಪಿ ಜಿಲ್ಲೆಯಲ್ಲಿ 2020ರ ಅ.5ರಿಂದ ನವೆಂಬರ್ ತಿಂಗಳವರೆಗೆ ನ್ಯಾಯಾಧೀಶರು, ಸಿಬ್ಬಂದಿಗಳು, ವಕೀಲರು, ಅಭಿಯೋಜಕರು, ಪೊಲೀಸ್, ಜಿಲ್ಲಾಡಳಿತ, ಆರೋಗ್ಯ ಇಲಾಖೆಗಳ ಸಹಕಾರದೊಂದಿಗೆ 553 ಸಿವಿಲ್ ಕೇಸುಗಳು ಮತ್ತು 1085 ಕ್ರಿಮಿನಲ್ ಕೇಸುಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಅವರು ಹೇಳಿದರು.

ನ.7ರಿಂದ 30ರವೆರೆಗೆ 24 ಇ-ಫೈಲಿಂಗ್ ಸೇರಿದಂತೆ ಒಟ್ಟು 2124 ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿದ್ದು, 253 ನ್ಯಾಯಾಲಯ ದಲ್ಲಿ ಮತ್ತು 37 ವಿಡಿಯೋ ಕಾನ್ಫರೆನ್ಸ್ ಮೂಲಕ ಒಟ್ಟು 390 ಸಾಕ್ಷಗಳ ಹೇಳಿಕೆ ಪಡೆಯಲಾಗಿದೆ ಎಂದ ಅವರು ಮಾಹಿತಿ ನೀಡಿದರು.

ಮುಖ್ಯ ಅತಿಥಿಯಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಪ್ರಾಧಿಕಾರದಿಂದ ಜಿಲ್ಲೆಯಲ್ಲಿ 12ಕ್ಕೂ ಅಧಿಕ ಮೀನು ಮಾರುಕಟ್ಟೆ ನಿರ್ಮಿಸಲು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅದೇ ರೀತಿ ಪ್ರಾಧಿಕಾರದ ಹಲವು ಯೋಜನೆಗಳು ಕೋವಿಡ್ ಮತ್ತು ಅನುದಾನದ ಕೊರತೆಯಿಂದ ವಿಳಂಬವಾಗಿದೆ ಎಂದರು.

ಅಧ್ಯಕ್ಷತೆಯನ್ನು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜಿತ್ ಎಸ್. ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್., ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರದೀಪ್ ಡಿಸೋಜ ಉಪಸ್ಥಿತರಿದ್ದರು.

ವಕೀಲರ ಸಂಘದ ಅಧ್ಯಕ್ಷ ದಿವಾಕರ್ ಎಂ.ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರೆನಾಲ್ಡ್ ಪ್ರವೀಣ್ ಕುಮಾರ್ ವಂದಿಸಿದರು. ನ್ಯಾಯವಾದಿ ಮೇರಿ ಶ್ರೇಷ್ಠ ಕಾರ್ಯಕ್ರಮ ನಿರೂಪಿಸಿದರು.

1784 ಪ್ರಕರಣಗಳ ಇತ್ಯರ್ಥ 

ಉಡುಪಿ ಜಿಲ್ಲೆಯಲ್ಲಿ ಸೆ.19ರಂದು ನಡೆದ ಮೆಗಾ ಲೋಕ ಅದಾಲತ್‌ನಲ್ಲಿ ವಕೀಲರು, ಅಭಿಯೋಜಕರು, ಇನ್ಸೂರೆನ್ಸ್ ಕಂಪೆನಿಯ ಸಹಕಾರ ದೊಂದಿಗೆ 1784 ಪ್ರಕರಣಗಳನ್ನು ಆನ್‌ಲೈನ್ ಮೂಲಕ ಇತ್ಯರ್ಥ ಪಡಿಸಲಾಗಿದೆ. ಮುಂದೆ ಡಿ.19ರಂದು ನಡೆಯುವ ಮೆಗಾ ಲೋಕ್‌ ಅದಾಲತ್‌ ನಲ್ಲಿಯೂ ವಕೀಲರು, ಪ್ರಾಸಿಕ್ಯೂಟರ್, ಇನ್ಸೂರೆನ್ಸ್ ಕಂಪೆನಿಯವರು ಅಗತ್ಯವಾಗಿ ಸಹಕರಿಸಬೇಕು ಎಂದು ನ್ಯಾ.ಅಶೋಕ್ ಎಸ್. ಕಿನಗಿ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News