ಕ್ರಿಸ್‌ಮಸ್ ಸಂಭ್ರಮದಲ್ಲಿ ಪಾಲ್ಗೊಳ್ಳದಂತೆ ಹಿಂದುಗಳಿಗೆ ಬಜರಂಗದಳದ ಎಚ್ಚರಿಕೆ

Update: 2020-12-05 13:45 GMT

ಗುವಾಹಟಿ, ಡಿ.5: ಕ್ರಿಸ್‌ಮಸ್ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಚರ್ಚ್‌ಗೆ ಹೋಗುವ ಹಿಂದುಗಳನ್ನು ಥಳಿಸುತ್ತೇವೆ ಎಂದು ಬಲಪಂಥೀಯ ಹಿಂದು ಸಂಘಟನೆ ಬಜರಂಗದಳದ ಮುಖಂಡ ಎಚ್ಚರಿಕೆ ನೀಡಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕ್ರಿಶ್ಚಿಯನ್ನರು ಬಹುಸಂಖ್ಯಾತರಾಗಿರುವ ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಲ್ಲಿ ರಾಮಕೃಷ್ಣ ಮಿಷನ್ ಅಂಗಸಂಸ್ಥೆ ವಿವೇಕಾನಂದ ಕೇಂದ್ರವನ್ನು ಮುಚ್ಚಿರುವುದರಿಂದ ತನಗೆ ಆಘಾತವಾಗಿದೆ. ಆದ್ದರಿಂದ ಕ್ರಿಸ್‌ಮಸ್ ದಿನಾಚರಣೆ ಮತ್ತು ಹಬ್ಬದಲ್ಲಿ ಭಾಗವಹಿಸಲು ಹಿಂದೂಗಳಿಗೆ ಅವಕಾಶ ನೀಡುವುದಿಲ್ಲ ಎಂದು ಬಜರಂಗದಳದ ಮಾತೃಸಂಸ್ಥೆ ವಿಶ್ವಹಿಂದೂ ಪರಿಷದ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೀತು ನಾಥ್ ಎಂಬಾತ ಎಚ್ಚರಿಕೆ ನೀಡಿದ್ದಾನೆ.

ನಮ್ಮ ಪ್ರಾರ್ಥನಾ ಕೇಂದ್ರವನ್ನು ಕ್ರಿಶ್ಚಿಯನ್ನರು ಮುಚ್ಚಿದ್ದರೂ, ಅವರ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಚರ್ಚ್‌ಗೆ ತೆರಳುವ ಹಿಂದುಗಳನ್ನು ಕಂಡರೆ ನನಗೆ ಸಿಟ್ಟು ಬರುತ್ತದೆ. ಈ ಬಾರಿಯ ಕ್ರಿಸ್‌ಮಸ್‌ನಲ್ಲಿ ಯಾವುದೇ ಹಿಂದುಗಳು ಚರ್ಚ್‌ಗೆ ಹೋಗದಂತೆ ನಾವು ನೋಡಿಕೊಳ್ಳುತ್ತೇವೆ.

ನಾವು ಹಿಂದುಗಳನ್ನು ಥಳಿಸಿದರೆ ಮರುದಿನದ ಪತ್ರಿಕೆಯಲ್ಲಿ ‘ಗೂಂಡಾ ದಳ’ದಿಂದ ದಾಂಧಲೆ ಎಂದು ಸುದ್ದಿಯಾಗುತ್ತದೆ. ಆದರೆ ಇದು ನಮ್ಮ ಉದ್ದೇಶವಲ್ಲ ಎಂದು ನಾಥ್ ಹೇಳಿದ್ದು ಈ ವೀಡಿಯೊ ವೈರಲ್ ಆಗಿದೆ. ಅಸ್ಸಾಂನ ಕಚಾರ್ ಜಿಲ್ಲೆಯ ಸಿಲ್‌ಚಾರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಾಥ್ ಮಾತನಾಡಿದ್ದು ಈ ಸಂದರ್ಭ ಸಭೆಯಲ್ಲಿ ಕೇಸರಿ ಬಟ್ಟೆ ಧರಿಸಿದ್ದ ಸುಮಾರು 70 ಮಂದಿ ‘ಜೈ ಶ್ರೀರಾಂ’ ಎಂದು ಘೋಷಿಸುವುದೂ ವೀಡಿಯೊದಲ್ಲಿ ದಾಖಲಾಗಿದೆ. ಸಿಲ್‌ಚಾರ್‌ನಲ್ಲಿ ಯಾವುದೇ ಪ್ರಾರ್ಥನಾ ಕೇಂದ್ರವನ್ನು ಮುಚ್ಚಿಲ್ಲ. ರಜಾ ದಿನದ ಹಿನ್ನೆಲೆಯಲ್ಲಿ, ಅಲ್ಲಿರುವ ಸಾಂಸ್ಕೃತಿಕ ಕೇಂದ್ರದ ಗೇಟ್‌ಗೆ ಬೀಗ ಜಡಿಯಲಾಗಿದೆ ಎಂದು ಮೇಘಾಲಯ ಸರಕಾರದ ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News