ಗೋಡೆ ಬರಹ ಪ್ರಕರಣ; ಪ್ರಚಾರಕ್ಕಾಗಿ ನಡೆದ ಕೃತ್ಯ, ಇಬ್ಬರು ಆರೋಪಿಗಳ ಬಂಧನ : ಕಮಿಷನರ್ ವಿಕಾಸ್ ‌ಕುಮಾರ್

Update: 2020-12-05 16:36 GMT

ಮಂಗಳೂರು, ಡಿ.5: ನಗರದಲ್ಲಿ ಪ್ರತ್ಯೇಕ ಕಡೆಗಳಲ್ಲಿ ಕಂಡುಬಂದ ಪ್ರಚೋದನಕಾರಿ ಗೋಡೆಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಪ್ರಚಾರ ಪಡೆಯುವ ಉದ್ದೇಶದಿಂದ ಆರೋಪಿಗಳು ಕೃತ್ಯ ನಡೆಸಿದ್ದಾರೆ ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್‌ ಕುಮಾರ್ ತಿಳಿಸಿದ್ದಾರೆ.

ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಆಯುಕ್ತರು, ಪ್ರಚೋದನಕಾರಿ ಗೋಡೆಬರಹ ಪ್ರಕರಣದಲ್ಲಿ ತೀರ್ಥಹಳ್ಳಿ ನಿವಾಸಿಗಳಾದ ಮುಹಮ್ಮದ್ ಶಾರೀಕ್ (22), ಮಾಝ್ ಮುನೀರ್ ಅಹ್ಮದ್ (21) ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ಓರ್ವ ಮಂಗಳೂರಿನಲ್ಲೇ ಇದ್ದು, ಇನ್ನೋರ್ವ ತೀರ್ಥಹಳ್ಳಿಯಿಂದ ಬಂದು ಕೃತ್ಯ ನಡೆಸಿದ್ದಾನೆ ಎಂದರು.

ಪ್ರಕರಣದ ಒಂದನೇ ಆರೋಪಿ ಮುಹಮ್ಮದ್ ಶಾರೀಕ್ ತೀರ್ಥಹಳ್ಳಿಯಲ್ಲಿ ಹೋಲ್‌ಸೇಲ್ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದಾನೆ. ಕಳೆದ ಒಂದೂವರೆ ತಿಂಗಳ ಹಿಂದೆ ಮಂಗಳೂರಿಗೆ ಆಗಮಿಸಿದ ಈತ ಆನ್‌ಲೈನ್ ಫುಡ್ ಡೆಲಿವರಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ. 2ನೇ ಆರೋಪಿ ಮಾಝ್ ಮುನೀರ್ ಅಹ್ಮದ್ ಎಂಬಾತನು ನಗರದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೂರನೇ ವರ್ಷದ ಬಿ.ಟೆಕ್ ವಿದ್ಯಾಭ್ಯಾಸ ಮಾಡುತ್ತಿ ದ್ದಾನೆ. ಈತ ಬಲ್ಮಠದ ಅಪಾರ್ಟ್‌ಮೆಂಟ್‌ವೊಂದರಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆಯು ಕೇಂದ್ರ ಉಪ ವಿಭಾಗದ ಎಸಿಪಿ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಪತ್ತೆ ಕಾರ್ಯ ನಡೆಸಿದ ಅಧಿಕಾರಿ, ಸಿಬ್ಬಂದಿ ನಗರದ ಎಲ್ಲ ಕಡೆ ಸಂಚರಿಸಿ ತಾಂತ್ರಿಕ ವಿಧಾನದ ಮೂಲಕ ಸಾಕ್ಷಾಧಾರಗಳನ್ನು ಕಲೆ ಹಾಕಿದ್ದಾರೆ. ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದರು.

ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಕೊಡುವಂತೆ ಮನವಿ ಮಾಡಲಾಗುವುದು. ಪ್ರಕರಣದಲ್ಲಿ ಭಾಗಿಯಾದವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದರು.

ನಗರದ ಕದ್ರಿಯ ಅಪಾರ್ಟ್‌ಮೆಂಟ್ ಗೋಡೆ ಮೇಲೆ ಪ್ರಚೋದನಕಾರಿ ಬರಹ ಬರೆದಿದ್ದು ನ.27ರಂದು ಬೆಳಕಿಗೆ ಬಂದಿದ್ದರೆ, ಕೋರ್ಟ್ ಸಮೀಪದ ಹಳೆ ಪೊಲೀಸ್ ಔಟ್‌ಪೋಸ್ಟ್ ಮೇಲೆ ಬರೆದಿದ್ದು ನ.29ರಂದು ಬೆಳಕಿಗೆ ಬಂದಿತ್ತು. ಆದರೆ ಆರೋಪಿಗಳು ಮೊದಲು ಬರೆದದ್ದು ಕೋರ್ಟ್ ಆವರಣದ ಗೋಡೆ ಮೇಲೆ, ಅದೂ ಮೂರು ವಾರಗಳ ಹಿಂದೆಯೇ ಬರೆದಿದ್ದರು. ಆದರೆ ಅದು ಜನರ ಗಮನಕ್ಕೆ ಬಾರದೆ ಇದ್ದುದರಿಂದ ಜನರ ಕಣ್ಣಿಗೆ ಎದ್ದು ಕಾಣುವಂತೆ ಕದ್ರಿ ಬಟ್ಟಗುಡ್ಡೆಯ ಅಪಾರ್ಟ್‌ಮೆಂಟ್ ಗೋಡೆಯನ್ನು ಆಯ್ಕೆ ಮಾಡಿ, ಅಲ್ಲಿ ನ.27ರಂದು ಮುಂಜಾನೆ ಪ್ರಚೋದನಕಾರಿ ಬರಹ ಬರೆದಿದ್ದಾರೆ ಎಂದು ಪೊಲೀಸ್ ಆಯುಕ್ತರು ವಿವರಿಸಿದರು.

ನ.27ರಂದು ನಸುಕಿನಜಾವ ಕದ್ರಿಯ ಸರ್ಕ್ಯೂಟ್ ಹೌಸ್ ಸಮೀಪದ ಬಿಜೈ ಬಟ್ಟಗುಡ್ಡೆಯ ಅಪಾರ್ಟ್‌ಮೆಂಟ್‌ವೊಂದರ ಆವರಣ ಗೋಡೆ ಮೇಲೆ ‘ಲಷ್ಕರ್ ಝಿಂದಾಬಾದ್’ ಶಬ್ದದ ಹ್ಯಾಷ್‌ಟ್ಯಾಗ್ ಬಳಸಿ ಗೋಡೆ ಬರಹ ಬರೆಯಲಾಗಿತ್ತು. ಈ ಬಗ್ಗೆ ಮಂಗಳೂರು ಪೂರ್ವ (ಕದ್ರಿ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.

ನ.29ರಂದು ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಹಳೆಯ ಕಟ್ಟಡದ ಗೋಡೆಯಲ್ಲೂ ಬರೆಯಲಾಗಿತ್ತು. ಈ ಬಗ್ಗೆ ಮಂಗಳೂರು ಉತ್ತರ (ಬಂದರ್) ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎರಡೂ ಕಡೆ ಪೇಂಟಿಂಗ್‌ನ ಸ್ಪ್ರೇಯರ್ ಬಳಸಿ ಬರೆಯಲಾಗಿತ್ತು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತಾಲಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಂ ಶಂಕರ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ್ ಎ. ಗಾಂವ್ಕರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಚಾರ ಉದ್ದೇಶ

ಪ್ರಕರಣದಲ್ಲಿ ಬಂಧಿತ ಆರೋಪಿಗಳಾದ ಇಬ್ಬರೂ ಒಂದೇ ಊರಿನವರು. ಈ ಮೊದಲಿನಿಂದಲೇ ಸ್ನೇಹಿತರು. ಕೃತ್ಯ ಎಸಗಿದ ಹಿಂದೆ ಮೇಲ್ನೋಟಕ್ಕೆ ಪ್ರಚಾರದ ಉದ್ದೇಶ, ಉದ್ದೇಶಪೂರ್ವಕ ಕೃತ್ಯ ಎನ್ನುವುದು ಕಂಡುಬಂದಿದೆ. ಇಬ್ಬರಿಗೂ ಅಪರಾಧ ಹಿನ್ನೆಲೆ ಇರುವುದು ಇದುವರೆಗೆ ಗೊತ್ತಾಗಿಲ್ಲ. ಪ್ರಚಾರ ಪಡೆಯುವ ಉದ್ದೇಶದಿಂದ ಕೃತ್ಯ ಎಸಗಿರುವುದು ಈವರೆಗಿನ ತನಿಖೆಯಲ್ಲಿ ಕಂಡುಬಂದಿದೆ. ಇದರ ಹಿಂದೆ ಸಂಘಟನೆಗಳ ನಂಟು ಇದೆಯೇ, ಬೇರೆ ಉದ್ದೇಶ ಏನಿತ್ತು ಎನ್ನುವುದನ್ನು ಇನ್ನಷ್ಟೇ ತನಿಖೆ ನಡೆಸಬೇಕಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್‌ ಕುಮಾರ್ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News