ಆಂತರಿಕ ಚರ್ಚೆಗಾಗಿ ರೈತರ ಬಳಿ ಕಾಲಾವಕಾಶ ಕೇಳಿದ ಕೇಂದ್ರ: ಆರನೇ ಸುತ್ತಿನ ಮಾತುಕತೆಗಳು ಬುಧವಾರಕ್ಕೆ ನಿಗದಿ

Update: 2020-12-05 16:14 GMT

 ಹೊಸದಿಲ್ಲಿ,ಡಿ.5: ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನಾನಿರತ ರೈತರು ಮತ್ತು ಸರಕಾರದ ನಡುವೆ ಶನಿವಾರ ನಡೆದ ಐದನೇ ಸುತ್ತಿನ ಮಾತುಕತೆಗಳು ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಲು ವಿಫಲಗೊಂಡಿವೆ. ಬುಧವಾರ ಆರನೇ ಸುತ್ತಿನ ಮಾತುಕತೆಗಳನ್ನು ನಡೆಸಲು ರೈತ ಸಂಘಟನೆಗಳ ನಾಯಕರು ಒಪ್ಪಿಕೊಂಡಿದ್ದಾರೆ. ಇದಕ್ಕೂ ಮುನ್ನ ‘ಯೆಸ್ ಆರ್ ನೋ ’ ಎಂಬ ಭಿತ್ತಿಪತ್ರಗಳನ್ನು ಸಭೆಯಲ್ಲಿ ಪ್ರದರ್ಶಿಸಿದ್ದ ಆಕ್ರೋಶಿತ ರೈತನಾಯಕರು,ಈ ‘ಅರ್ಥಹೀನ ಮಾತುಕತೆ ’ಗಳಿಂದ ಹೊರನಡೆಯುವುದಾಗಿಯೂ ಬೆದರಿಕೆಯೊಡ್ಡಿದ್ದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು,ಸರಕಾರದೊಳಗೆ ಚರ್ಚೆಗಳ ಬಳಿಕ ಹೊಸ ಪ್ರಸ್ತಾವವೊಂದನ್ನು ರೈತರ ಮುಂದಿರಿಸುವುದಾಗಿ ತಿಳಿಸಿದರು.

ಇಂದಿನ ಐದನೇ ಸುತ್ತಿನ ಮಾತುಕತೆಗಳಿಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಗೃಹಸಚಿವ ಅಮಿತ್ ಶಾ ಮತ್ತು ತೋಮರ್ ಸೇರಿದಂತೆ ಹಿರಿಯ ಸಚಿವರೊಂದಿಗೆ ಉನ್ನತ ಮಟ್ಟದ ಸಭೆಯೊಂದನ್ನು ನಡೆಸಿದ್ದರು. ಈ ಸಭೆಯಲ್ಲಿ ಪ್ರತಿಭಟನೆಗಳು ಮತ್ತು ಮಾತುಕತೆಗಳ ಬಗ್ಗೆ ಮೋದಿಯವರಿಗೆ ಮಾಹಿತಿಗಳನ್ನು ನೀಡಲಾಗಿತ್ತು.

ಇತ್ತೀಚಿನ ವರ್ಷಗಳಲ್ಲಿ ರೈತರ ಅತಿ ದೊಡ್ಡ ಪ್ರತಿಭಟನೆಗೆ ಕಾರಣವಾಗಿರುವ ನೂತನ ಕೃಷಿ ಕಾನೂನುಗಳಲ್ಲಿಯ ಕೆಲವು ಕಲಮ್‌ಗಳಿಗೆ ತಿದ್ದುಪಡಿಯನ್ನು ತರುವ ಕೊಡುಗೆಯನ್ನು ಸರಕಾರವು ಈ ಮೊದಲು ರೈತನಾಯಕರ ಮುಂದಿರಿಸಿತ್ತು.

ಸರಕಾರದ ಪರ ಮಾತುಕತೆಗಳ ನೇತೃತ್ವ ವಹಿಸಿದ್ದ ತೋಮರ್ ಮತ್ತು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಲಿಖಿತ ಪ್ರಸ್ತಾವವೊಂದನ್ನು ರೈತ ಪ್ರತಿನಿಧಿಗಳಿಗೆ ಸಲ್ಲಿಸಿದ್ದರು.

‘ಸರಕಾರವು ಕೃಷಿ ಕಾನೂನುಗಳನ್ನು ಹಿಂದೆಗೆದುಕೊಳ್ಳಬೇಕೆಂದು ನಾವು ಬಯಸಿದ್ದೇವೆ. ಯಾವುದೇ ತಿದ್ದುಪಡಿಯ ಕೊಡುಗೆಯನ್ನು ನಾವು ಒಪ್ಪುವುದಿಲ್ಲ ’ಎಂದು ಸಭೆಗೆ ಮುನ್ನ ದೋಆಬಾ ಕಿಸಾನ್ ಸಂಘರ್ಷ ಸಮಿತಿಯ ಹರ್ಸುಲಿಂದರ್ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸುವ ಮೂಲಕ ಕೇಂದ್ರವು ಸಭೆಯಲ್ಲಿ ಎದುರಿಸಲಿರುವ ಸವಾಲಿನ ಮುನ್ಸೂಚನೆ ಲಭಿಸಿತ್ತು. ಮಾತುಕತೆಗಳು ಆರಂಭವಾಗುವುದಕ್ಕೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಹಾಯಕ ಕೃಷಿ ಸಚಿವ ಕೈಲಾಷ್ ಚೌಧರಿ ಅವರು,ನೂತನ ಕೃಷಿಕಾನೂನುಗಳ ಕುರಿತು ರೈತರ ಶಂಕೆಗಳನ್ನು ಇಂದು ನಿವಾರಿಸಲಾಗುವುದು. ರೈತರು ತಮ್ಮ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News