ಸ್ವಸಹಾಯ ಸಂಘಗಳ ಸದಸ್ಯರಿಗೆ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ: ಡಾ.ಎಲ್.ಎಚ್.ಮಂಜುನಾಥ್

Update: 2020-12-05 15:58 GMT

ಉಡುಪಿ, ಡಿ.5: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರು ಮುಂಬರುವ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿದೆ. ಆದರೆ ಅವರು ಸಂಘಗಳ ವೇದಿಕೆಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳುವಂತಿಲ್ಲ ಎಂದು ಧರ್ಮಸ್ಥಳ ಎಸ್‌ಕೆಡಿಆರ್‌ಡಿಪಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಎಲ್.ಎಚ್.ಮಂಜುನಾಥ್ ಹೇಳಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಉಡುಪಿ ತಾಲೂಕು ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಅಂಬಾಗಿಲು ವಲಯ ಇವರ ಸಹಯೋಗದೊಂದಿಗೆ ಅಂಬಾಗಿಲು ಪುತ್ತೂರಿನ ಶ್ರೀಭಗವತಿ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಶನಿವಾರ ನಡೆದ ಪ್ರಗತಿಬಂಧು ಸ್ವಸಹಾಯ ಸಂಘಗಳ ಸದಸ್ಯರ ಸಾಧನಾ ಸಮಾವೇಶ, ಸ್ವಸಹಾಯ ಸಂಘಗಳ ಸದಸ್ಯರಿಗೆ ಸ್ವಉದ್ಯೋಗಕ್ಕೆ ಪೂರಕವಾಗಿ ದ್ವಿಚಕ್ರ ವಾಹನಗಳ ವಿತರಣೆ ಹಾಗೂ ಹಸಿರು ಇಂಧನ ಸಾಧನಗಳ ವಿತರಣಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ನಮ್ಮ ಸದಸ್ಯರು ಜನಪ್ರತಿನಿಧಿಗಳಾಗಿ ಗ್ರಾಮಸಭೆಗಳಲ್ಲಿ ಸ್ವಸಹಾಯ ಚಳುವಳಿಗೆ ಗೌರವ ದೊರೆಯುವಂತೆ ನೋಡಿಕೊಳ್ಳಬಹುದು. ಆದರೆ ವೇದಿಕೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ. ಸಂಘದಲ್ಲಿ, ಸಂಘದ ಸಭೆಗಳಲ್ಲಿ ಪ್ರಚಾರ ಬೇಡ. ಈ ಬಗ್ಗೆ ಪ್ರತಿ ಸಂಘಕ್ಕೆ ಈಗಾಗಲೇ ಸುತ್ತೋಲೆಯನ್ನು ಕಳುಹಿಸಲಾಗಿದೆ ಎಂದು ಮಂಜುನಾಥ್ ತಿಳಿಸಿದರು.

ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ನಿಂತ ನೀರಲ್ಲ. ನಮ್ಮದು ಚಲನಶೀಲ ಯೋಜನೆ. ನಮ್ಮ ಸ್ವಸಹಾಯ ಗುಂಪಿನ ಸದಸ್ಯರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಲಾಗುತ್ತದೆ. ಬೇಕಾದ ಸೌಲಭ್ಯಗಳನ್ನು ಸುಲಭದಲ್ಲಿ ನೀಡಲು ಪ್ರಯತ್ನಿಸಲಾಗುತ್ತದೆ ಎಂದವರು ಹೇಳಿದರು.

ಎಸ್ ಶ್ರೇಣಿಯ ಸಂಘದ ಸದಸ್ಯರಿಗೆ ಆಧುನಿಕ ತಂತ್ರಜ್ಞಾನದಲ್ಲಿ ಆ್ಯಪ್ ಮೂಲಕ ಮೂರು ಲಕ್ಷ ರೂ.ವರೆಗೆ ಸಾಲ ಒದಗಿಸುವ ಬಗ್ಗೆ ಹಾಗೂ ಸ್ವ-ಉದ್ಯೋಗ ಕೈಗೊಳ್ಳಲು 50,000ರೂ.ಗಳಿಂದ 5ಲಕ್ಷ ರೂ.ವರೆಗೆ ಸಿಡ್ಬಿ ಸಾಲ ನೀಡುವ ಬಗ್ಗೆ ಅವರು ಮಾಹಿತಿಗಳನ್ನು ನೀಡಿದರು. ಪ್ರತಿ ಊರಿನಲ್ಲೂ ಗ್ರಾಹಕ ಸೇವಾ ಕೇಂದ್ರ ತೆರೆಯಲಾಗಿದೆ ಎಂದರು.

ನಗದು ರಹಿತ ವ್ಯವಹಾರ: ಇನ್ನು ಮುಂದೆ ಸ್ವಸಹಾಯ ಸಂಘದ ಸದಸ್ಯರು ನಗದುರಹಿತ ವ್ಯವಹಾರ ನಡೆಸಲು ಬೇಕಾದ ವ್ಯವಸ್ಥೆ ಆರಂಭಿಸಲಿ ದ್ದೇವೆ. ಪ್ರಾಯೋಗಿಕವಾಗಿ ಕಿನ್ನಿಗೋಳಿ ವಲಯವನ್ನು ನಗದು ರಹಿತ ವಲಯವನ್ನಾಗಿ ಮಾಡುತಿದ್ದು, ಮುಂದೆ ಇದನ್ನು ಎಲ್ಲಾ ವಲಯಗಳಿಗೂ ವಿಸ್ತರಿಸಲಾಗುವುದು ಎಂದು ಡಾ.ಮಂಜುನಾಥ್ ತಿಳಿಸಿದರು.

ಇದೇ ಸಂದರ್ಭದಲ್ಲಿ ಡಾ.ಮಂಜುನಾಥ್ ಅವರು ಪ್ರಗತಿಬಂಧು ಸ್ವಸಹಾಯ ಸದಸ್ಯರುಗಳಿಗೆ ದ್ವಿಚಕ್ರ ವಾಹನಗಳ ಕೀಗಳನ್ನು ಹಸ್ತಾಂತರಿಸಿ ದರು. ಬ್ಯಾಂಕ್ ಆಫ್ ಬರೋಡದ ಉಡುಪಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ಮ್ಯಾನೇಜರ್ ಆದ ರವಿ ಎಚ್.ಜಿ. ಅವರು ಹಸಿರು ಇಂಧನ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು.

ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪುತ್ತೂರು ಬಿ ಅಧ್ಯಕ್ಷೆ ಶಾಂತಿ ರವಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪುತ್ತೂರು ಶ್ರೀಭಗವತಿ ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣಮೂರ್ತಿ ಭಟ್, ಯೋಜನೆಯ ಕರಾವಳಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ವಸಂತ ಸಾಲಿಯಾನ್ ಎಂ., ಜನಜಾಗೃತಿ ವೇದಿಕೆ ಅಂಬಾಗಿಲು ವಲಯದ ಹರೀಶ್ ಕೋಟ್ಯಾನ್, ವೇದಿಕೆಯ ಮಾಜಿ ಅಧ್ಯಕ್ಷ ದೇವದಾಸ ಹೆಬ್ಬಾರ್, ನಗರಸಭಾ ಸದಸ್ಯೆ ಜಯಂತಿ ಕೆ. ಉಪಸ್ಥಿತರಿದ್ದರು.

ಉಡುಪಿ ತಾಲೂಕು ಯೋಜನಾಧಿಕಾರಿ ರೋಹಿತ್ ಎಚ್. ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಲಯ ಮೇಲ್ವಿಚಾರಕ ಜಯಕರ ಕಾರ್ಯಕ್ರಮ ನಿರೂಪಿಸಿ, ಕೃಷಿ ಮೇಲ್ವಿಚಾರಕ ರಾಘವೇಂದ್ರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News