‘ಉತ್ತರಾಯಣದ ಬಳಿಕ ಶೀರೂರು ಮಠಕ್ಕೆ ಉತ್ತರಾಧಿಕಾರಿ ನೇಮಕ’

Update: 2020-12-05 16:03 GMT

ಉಡುಪಿ, ಡಿ.5: 2018ರ ಜು.19ರಂದು ಶೀರೂರು ಮಠಾಧೀಶರಾದ ಶ್ರೀಲಕ್ಷ್ಮೀವರ ತೀರ್ಥರು ನಿಧನರಾದ ಬಳಿಕ ಖಾಲಿ ಇರುವ ಪೀಠಕ್ಕೆ ಮುಂದಿನ ಉತ್ತರಾಯಣದ ಬಳಿಕ (2021ರ ಜ.14ರ ಬಳಿಕ) ಯೋಗ್ಯ ವಟುವನ್ನು ನೇಮಕ ಮಾಡುವುದಾಗಿ, ಈಗ ಶೀರೂರು ಮಠದ ಸಂಪೂರ್ಣ ಆಡಳಿತವನ್ನು ನೋಡಿಕೊಳ್ಳುತ್ತಿರುವ ದ್ವಂದ್ವ ಮಠವಾದ ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥರು ತಿಳಿಸಿದ್ದಾರೆ.

 ಶೀರೂರು ಮಠದಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಶೀರೂರು ಮಠದ ಪ್ರಸಕ್ತ ವಿದ್ಯಮಾನಗಳ ಕುರಿತು ಮಠದ ಭಕ್ತಾಭಿಮಾನಿಗಳಿಗೆ ಮಾಹಿತಿ ನೀಡಲು ಶ್ರೀಪಲಿಮಾರು ಮಠದ ಹಿರಿಯ ಯತಿಗಳಾದ ಶ್ರೀವಿದ್ಯಾಧೀಶ ತೀರ್ಥರ ಉಪಸ್ಥಿತಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಠದ ಎರಡು ವರ್ಷಗಳ ವಿದ್ಯಮಾನಗಳ ಕುರಿತು ವಿವರಗಳನ್ನು ನೀಡಿದರು.

ಶೀರೂರು ಮಠಕ್ಕೆ ನಾವು ಈಗಾಗಲೇ ಒಬ್ಬ ಯೋಗ್ಯ ವಟುವನ್ನು ಆಯ್ಕೆ ಮಾಡಿದ್ದು, ಆತ ತಮ್ಮ ಸುಪರ್ದಿಯಲ್ಲಿ ವೇದಾದ್ಯಯನ ಮಾಡುತಿ ದ್ದಾನೆ. ಮುಂದಿನ ಉತ್ತರಾಯಣದಲ್ಲಿ ಆತನಿಗೆ ಶೀರೂರು ಮಠದ ಯತಿಯಾಗಿ ಪಟ್ಟಾಭಿಷೇಕ ನೆರವೇರಿಸುವ ಸಂಕಲ್ಪ ಮಾಡಿದ್ದೇವೆ. ಅಷ್ಟಮಠಗಳ ಎಲ್ಲಾ ಹಿರಿಯ ಮಠಾಧೀಶರ ವಿಶೇಷ ಸಹಕಾರದೊಂದಿಗೆ ನಾವು ನಮ್ಮ ಕರ್ತವ್ಯವನ್ನು ನಿರ್ವಹಿಸುತ್ತೇವೆ. ಇದಕ್ಕೆ ಮಠದ ಭಕ್ತರ ಸಹಕಾರವನ್ನೂ ಕೋರುವುದಾಗಿ ಅವರು ನುಡಿದರು.

ಶೀರೂರು ಮಠದ ಆಡಳಿತವನ್ನು ಕೈಗೆತ್ತಿಕೊಂಡು ಸುಮಾರು 50 ಲಕ್ಷ ರೂ.ವೆಚ್ಚದಲ್ಲಿ ಶೀರೂರು ಮೂಲ ಮಠ ಹಾಗೂ 20 ಲಕ್ಷ ರೂ.ವೆಚ್ಚದಲ್ಲಿ ಉಡುಪಿ ಮಠವನ್ನು ಜೀರ್ಣೋದ್ಧಾರಗೊಳಿಸಿದ್ದೇವೆ. ಮೂಲಮಠದಿಂದ 2ಕಿ.ಮೀ. ದೂರದಲ್ಲಿ ಸಾಂತ್ಯಾರು ಮಠದ ನವೀಕರಣ ಹಾಗೂ ಮುಖ್ಯಪ್ರಾಣ ದೇವರ ಗುಡಿಯ ನವೀಕರಣ ಕಾರ್ಯ ನಡೆಯುತ್ತಿದೆ. ಅದೇ ರೀತಿ ಅಲ್ಲಿನ ದುರ್ಗಾಪರಮೇಶ್ವರಿ ಅಮ್ಮನವರ ಗದ್ದುಗೆ ಹಾಗೂ ಪಾಪುಜೆ ಮಠದ ಜೀರ್ಣೋದ್ಧಾರವನ್ನು ಕೈಗೊಳ್ಳಲಿದ್ದೇವೆ ಎಂದರು.

ಕನಕ ಮಾಲ್ ವಿವಾದ: ಶೀರೂರು ಮಠಾಧೀಶರ ಕಾಲದಲ್ಲಿ ಪ್ರಾರಂಭಗೊಂಡು ಈಗ ನೆನೆಗುದಿಗೆ ಬಿದ್ದಿರುವ ಕಲ್ಸಂಕ ಸಮೀಪದ ಕನಕ ಮಾಲ್‌ನ ವಿವಾದ ಸೌಹಾರ್ದ ಯುತವಾಗಿ ಸಂಧಾನದ ಮೂಲಕ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದ್ದು, ವಿವಾದ ಕೊನೆಗೊಳ್ಳುವ ಆಶಾಕಿರಣ ಮೂಡಿದೆ ಎಂದರು.

ಮಠದ ಭಕ್ತರು ಆಗಿರುವ ಮುಂಬೈಯ ಹಿರಿಯ ಉದ್ಯಮಿ ಇಬ್ಬರು ಕನಕ ಮಾಲ್‌ನ ಸಂಪೂರ್ಣ ಕಾಮಗಾರಿ ಕೈಗೆತ್ತಿಕೊಳ್ಳಲು ಒಪ್ಪಿದ್ದು, ಕೆಲವೇ ದಿನಗಳಲ್ಲಿ ಈ ಬಗ್ಗೆ ಒಪ್ಪಂದ ಮುಗಿಯಲಿದೆ. ಕನಕ ಮಾಲ್‌ಗೆ ಮುಂಗಡ ನೀಡಿದ್ದ ಹತ್ತು ಮಂದಿಗೆ ಅಂದಾಜು 10 ಕೋಟಿ ರೂ.ಗಳನ್ನು ಮರು ಪಾವತಿಸುವ ಜವಾಬ್ದಾರಿಯನ್ನು ಉದ್ಯಮಿ ವಹಿಸಿಕೊಂಡಿದ್ದಾರೆ. ಅಲ್ಲದೇ ಉದ್ದೇಶಿತ ಕನಕ ಮಾಲ್‌ನ ನೆಲ ಮಹಡಿ ಮತ್ತು 8 ಮಹಡಿಗಳ ಪೈಕಿ ಮೇಲಿನ ನಾಲ್ಕು ಮಹಡಿಗಳನ್ನು ಶೀರೂರು ಮಠಕ್ಕೆ ಹಸ್ತಾಂತರಿಸಲಿದ್ದಾರೆ ಎಂದು ಸೋದೆ ಮಠದ ರತ್ನಕುಮಾರ್ ತಿಳಿಸಿದರು.

17.34 ಕೋಟಿ ರೂ.ಆದಾಯ ತೆರಿಗೆ ಬಾಕಿ:  ಆದಾಯ ತೆರಿಗೆ ಇಲಾಖೆಯೊಂದಿಗೆ ಶೀರೂರು ಮಠದ 17.34 ಕೋಟಿ ರೂ.ಆದಾಯ ತೆರಿಗೆ ಪಾವತಿ ವಿವಾದ ಕುರಿತು ಮಾಹಿತಿ ನೀಡಿದ ಬೆಂಗಳೂರಿನ ಹಿರಿಯ ಲೆಕ್ಕಪರಿಶೋಧಕ ಎಚ್.ವಿ.ಗೌತಮ್, 2018ರ ಡಿ.28ರಂದು ನೀಡಲಾದ ಆದೇಶವು ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥರ ಹೆಸರಿನಲ್ಲಿ ಜಾರಿಯಾಗಿತ್ತು ಎಂದರು.

ಈ ಆದೇಶದ ಹಿನ್ನೆಲೆಯಲ್ಲಿ ಶೀರೂರು ಮಠದ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸ್ಥಬ್ಧಗೊಳಿಸಲಾಗಿತ್ತು. ಸೋದೆಶ್ರೀಗಳ ಗಮನಕ್ಕೆ ಬಾರದೇ ಈ ಆದೇಶವನ್ನು ಹೊರಡಿಸಲಾಗಿತ್ತು. ಆದ್ದರಿಂದ ಇದಕ್ಕೆ ಕಾನೂನಿನ ಚೌಕಟ್ಟಿನಲ್ಲಿ ಮಾನ್ಯತೆ ಇರಲಿಲ್ಲ. ಆದುದರಿಂದ ಶ್ರೀಮಠದ ವತಿಯಿಂದ ಮನವಿಯನ್ನು ಸಲ್ಲಿಸಲಾಗಿತ್ತು. ಕೋವಿಡ್ ಕಾರಣದಿಂದ ವಿಳಂಬವಾಗಿ ವಿಚಾರಣೆ ನಡೆದು ಬ್ಯಾಂಕ್ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಲಾಗಿದೆ ಹಾಗೂ ಇದ್ದ ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ ಎಂದರು.

ಇದೀಗ ಎಲ್ಲರ ಸತತ ಪ್ರಯತ್ನಗಳಿಂದ ಮಠಕ್ಕೆ ಆದಾಯ ತೆರಿಗೆ ಕಾನೂನಿನ ಸೆಕ್ಷನ್ 12ಎಎ ನೋಂದಣಿ ದೊರಕಿದ್ದು, ಇದರಡಿ ಮಠದ ಯಾವುದೇ ಬಂಡವಾಳ ಲಾಭಾಂಶಕ್ಕೆ ತೆರಿಗೆ ವಿನಾಯಿತಿ ದೊರೆಯಲಿದೆ ಎಂದು ಗೌತಮ್ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರೊ.ಎಂ.ಬಿ.ಪುರಾಣಿಕ್, ಡಾ.ರವೀಂದ್ರನಾಥ್ ಶ್ಯಾನುಭೋಗ್, ತೋಟದಮನೆ ದಿವಾಕರ ಶೆಟ್ಟಿ, ಬಿ.ಕೆ.ನಾರಾಯಣ, ದೇವಾನಂದ ಶೆಣೈ, ಬಾಲಾಜಿ ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News