ವಿಕೋಪದಿಂದ ರಕ್ಷಣೆ: ಉದ್ಯಾವರದಲ್ಲಿ ಅಣಕು ಪ್ರದರ್ಶನ

Update: 2020-12-05 16:05 GMT

ಉಡುಪಿ, ಡಿ.5: ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಸಂತ್ರಸ್ಥರನ್ನು ರಕ್ಷಿಸಲು ಮತ್ತು ಕೈಗೊಳ್ಳಬೇಕಾದ ಅಗತ್ಯ ಮುಂಜಾಗ್ರತಾ ಕ್ರಮಗಳ ಕುರಿತ ಅಣಕು ಪ್ರದರ್ಶನವು ಉದ್ಯಾವರದ ನದಿ ತೀರದಲ್ಲಿ, 10ನೇ ಎನ್‌ಡಿಆರ್‌ಎಫ್ ತಂಡದ ಸಹಾಯಕ ಕಮಾಡೆಂಟ್ ಸೆಂಥಿಲ್ ‌ಕುಮಾರ್ ನೇತೃತ್ವದಲ್ಲಿ ಶನಿವಾರ ನಡೆಯಿತು.

ಪ್ರಾಕೃತಿಕ ವಿಕೋಪ ಸಂಭವಿಸುವ ಕುರಿತು ದೊರೆತ ಅಣಕು ಸಂದೇಶದ ಆಧಾರದಲ್ಲಿ, ಸ್ಥಳಕ್ಕೆ ಮೊದಲಿಗೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು. ಹೆಚ್ಚಿನ ನೆರವು ಕೋರಿ ಎನ್‌ಡಿಆರ್‌ಎಫ್ ತಂಡವನ್ನು ಸಂಪರ್ಕಿಸಲಾಯಿತು.

ನೀರಿನಲ್ಲಿ ದೋಣಿ ಮೂಲಕ ಸುರಕ್ಷಿತ ಸ್ಥಳಕ್ಕೆ ಆಗಮಿಸುತಿದ್ದ ಜನರಿದ್ದ ದೋಣಿ ಮುಳುಗಿದ್ದು, ಕೂಡಲೇ ಕಾರ್ಯಾಚರಣೆ ನಡೆಸಿದ ಎನ್‌ಡಿಆರ್‌ಎಫ್ ತಂಡ, ಮಹಿಳೆಯರು, ವೃದ್ದರು ಮತ್ತು ಮಕ್ಕಳನ್ನು ಆದ್ಯತೆಯಲ್ಲಿ ರಕ್ಷಿಸಿ, ಸೂಕ್ತ ಪ್ರಾಥಮಿಕ ಚಿಕಿತ್ಸೆ ನೀಡಿತು. ನಂತರ ಅವರನ್ನು ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು.

ಅಣಕು ಕಾರ್ಯಚರಣೆ ಸ್ಥಳದಲ್ಲಿ ಅಗತ್ಯವಿದ್ದ ಪ್ರತ್ಯೇಕ ಸ್ಥಳಗಳನ್ನು ಗುರುತಿಸಲಾಗಿತ್ತು. ನಿರ್ಗತಿಕರನ್ನು ಸ್ಥಳಾಂತರಿಸಲು ಕಾಳಜಿ ಕೇಂದ್ರ ಸಹ ತೆರೆಯಲಾಗಿತ್ತು. ಜಿಲ್ಲೆಯ ಪೊಲೀಸ್, ಅಗ್ನಿಶಾಮಕ, ಗೃಹ ರಕ್ಷಕ ದಳ, ನೆಹರು ಯುವ ಕೇಂದ್ರ ಮತ್ತು ಎನ್‌ಸಿಸಿ ವಿದ್ಯಾರ್ಥಿಗಳು ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಿದ್ದವು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ಜಿಲ್ಲಾ ವಿಪತ್ತು ಪರಿಣಿತ ರವಿ ಓಜನಹಳ್ಳಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News