ದಕ್ಷಿಣ ತಮಿಳುನಾಡಿನಲ್ಲಿ ಬುರೇವಿ ಚಂಡಮಾರುತ ಹಾವಳಿ

Update: 2020-12-05 16:40 GMT

ಚೆನ್ನೈ, ಡಿ. 5: ತಮಿಳುನಾಡಿನ ವಿವಿಧ ಭಾಗಗಳಲ್ಲಿ ನಿರಂತರ ಎರಡನೇ ದಿನವಾದ ಶನಿವಾರ ಕೂಡ ಬುರೇವಿ ಚಂಡಮಾರುತ ಹಾವಳಿ ಉಂಟು ಮಾಡಿದೆ. ಇದರಿಂದ ಸುರಿದ ಧಾರಾಕಾರ ಮಳೆಯಿಂದಾಗಿ 7 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ನೂರಾರು ಗ್ರಾಮಗಳು ಜಲಾವೃತವಾಗಿವೆ.

ಕುದ್ದಲೂರು ಜಿಲ್ಲೆಯಲ್ಲಿ ಸುಮಾರು 300 ಗ್ರಾಮಗಳು ಜಲಾವೃತವಾಗಿವೆ. ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂನ ವಿವಿಧ ಭಾಗಗಳಲ್ಲಿ ವಿದ್ಯುತ್ ಕಡಿತಗೊಂಡಿದೆ. ಮಳೆಯಿಂದ ಮೃತಪಟ್ಟವರ ಕುಟುಂಬಕ್ಕೆ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೆ ಮನೆ ಹಾಗೂ ಜಾನುವಾರುಗಳನ್ನು ಕಳೆದುಕೊಂಡವರಿಗೆ ಕೂಡ ಪರಿಹಾರ ಘೋಷಿಸಿದ್ದಾರೆ. ಪ್ರತಿ ಗೋವಿಗೆ 30 ಸಾವಿರ, ಕರುವಿಗೆ 16 ಸಾವಿರ ಹಾಗೂ ಮೇಕೆಗೆ 3,000 ಪರಿಹಾರ ನೀಡಲಾಗುವುದು ಎಂದು ಸರಕಾರ ತಿಳಿಸಿದೆ.

ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆ ಸಮರೋಪಾದಿಯಲ್ಲಿ ಮುಂದುವರಿದಿದೆ. ಸಂತ್ರಸ್ತ ಜಿಲ್ಲೆಗಳಲ್ಲಿ ಪುನರ್ವಸತಿಯನ್ನು ವೈಯಕ್ತಿಕವಾಗಿ ಪರಿಶೀಲನೆ ನಡೆಸಲು ಸಚಿವರನ್ನು ನಿಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಶನಿವಾರ ತಿಳಿಸಿದ್ದಾರೆ. ಆದಾಗ್ಯೂ, ಬುರೇವಿ ಚಂಡಮಾರುತ ತಮಿಳುನಾಡು ಹಾಗೂ ಕೇರಳದ ದಕ್ಷಿಣ ಕರಾವಳಿಗೆ ಶುಕ್ರವಾರ ಅಪ್ಪಳಿಸಲಿದೆ.

ಭಾರೀ ಮಳೆ ಹಾಗೂ ಗಂಟೆಗೆ 100 ಕಿ.ಮೀ. ಗಾಳಿ ಬೀಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಬುರೇವಿ ಚಂಡಮಾರುತ ದುರ್ಬಲಗೊಂಡು ನಿಮ್ನ ಒತ್ತಡವಾಗಿ ಬದಲಾಗಿದೆ ಎಂದು ಮೂಲಗಳು ತಿಳಿಸಿವೆ. ಬುರೇವಿ ಚಂಡಮಾರುತದ ಹಾವಳಿಯಿಂದ ತಮಿಳುನಾಡಿನ ದಕ್ಷಿಣ ಹಾಗೂ ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ. 66,000ಕ್ಕೂ ಅಧಿಕ ಜನರನ್ನು ಕುದ್ದಲೂರು ಜಿಲ್ಲೆಯಲ್ಲಿರುವ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಇನ್ನು 5,000 ಜನರನ್ನು ರಾಮನಾಥಪುರಕ್ಕೆ ಸ್ಥಳಾಂತರಿಸಲಾಗಿದೆ. ರಾಮೇಶ್ವರಂನಲ್ಲಿ ವಿದ್ಯುತ್ ಕಡಿತಗೊಂಡಿದೆ ಎಂದು ಅವು ತಿಳಿಸಿವೆ. ‘‘66,000 ಜನರಿಗೆ ನಾವು ಆಹಾರ ಪೂರೈಸುತ್ತಿದ್ದೇವೆ. ನಿರಂತರವಾಗಿ ಮಳೆ ಸುರಿಯುತ್ತಿರುವುದು ಸಮಸ್ಯೆಯಾಗಿದೆ. ವೀರನಂ ಜಲಾಶಯವನ್ನು ನಾವು ನಿಕಟವಾಗಿ ಗಮನಿಸುತ್ತಿದ್ದೇವೆ’’ ಎಂದು ಕುದ್ದಲೂರಿನ ಉಸ್ತುವಾರಿಯಾಗಿರುವ ಹಿರಿಯ ಸರಕಾರಿ ಅಧಿಕಾರಿ ಗಗನದೀಪ್ ಸಿಂಗ್ ಬೇಡಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News