ಕೊರೋನ ವೈರಸ್ ವಿಚಾರದಲ್ಲಿ ಸಂತೃಪ್ತ ಮನೋಭಾವ ಸಲ್ಲದು: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

Update: 2020-12-05 17:42 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಡಿ. 5: ಕೊರೋನ ವೈರಸ್ ಲಸಿಕೆ ಸಿದ್ಧಗೊಂಡಿದೆಯಷ್ಟೆ, ಅಷ್ಟಕ್ಕೇ ಈ ಮಾರಕ ಸಾಂಕ್ರಾಮಿಕ ಹೋಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಎಚ್ಚರಿಸಿದೆ.

ಕೊರೋನ ವೈರಸ್ ವಿಚಾರದಲ್ಲಿ ಈಗ ನಿರಾಳ ಮನೋಭಾವ ಹೊಂದಬಾರದು ಎಂದು ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಪರಿಸ್ಥಿತಿಗಳ ನಿರ್ದೇಶಕ ಮೈಕಲ್ ರಯಾನ್ ಹೇಳಿದರು.

‘‘ಲಸಿಕೆಗಳು ಮತ್ತು ಲಸಿಕೆ ನೀಡುವುದು ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಅತ್ಯಂತ ಪ್ರಭಾವಶಾಲಿ ಅಸ್ತ್ರವಾಗಿದೆ. ಆದರೆ, ಈ ಅಸ್ತ್ರವು ಅದರಷ್ಟಕ್ಕೆ ಕೆಲಸ ಮಾಡುವುದಿಲ್ಲ’’ ಎಂದರು.

ಲಸಿಕೆಗಳಿಗೆ ಸಂಬಂಧಿಸಿ ಆಗಿರುವ ಬೆಳವಣಿಗೆಯು ನಮ್ಮೆಲ್ಲರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದೆ ಹಾಗೂ ನಾವು ಈಗ ಸುರಂಗದ ಇನ್ನೊಂದು ಬದಿಯಲ್ಲಿ ಬೆಳಕನ್ನು ನೋಡಲು ಆರಂಭಿಸಿದ್ದೇವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಹೇಳಿದರು.

‘‘ಆದರೆ, ಸಾಂಕ್ರಾಮಿಕ ಹೋಗಿದೆ ಎಂಬುದಾಗಿ ಹೆಚ್ಚಿನ ಜನರು ಭಾವಿಸಿದ್ದಾರೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ಹೊಂದಿದೆ’’ ಎಂದರು.

‘‘ಹೆಚ್ಚಿನ ಸ್ಥಳಗಳಲ್ಲಿ ಕೊರೋನ ಸೋಂಕು ಪ್ರಕರಣಗಳ ಸಂಖ್ಯೆಯು ಅಗಾಧ ಪ್ರಮಾಣದಲ್ಲಿ ಹೆಚ್ಚಿದೆ. ಇದು ಆಸ್ಪತ್ರೆಗಳು ಮತ್ತು ಆರೋಗ್ಯ ಕೆಲಸಗಾರರ ಮೇಲಿನ ಒತ್ತಡವನ್ನು ಹೆಚ್ಚಿಸಿದೆ’’ ಎಂದು ಗೇಬ್ರಿಯೇಸಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News