ಆಕ್ರಮಿತ ಇಸ್ರೇಲಿ ಕಾಲನಿಗಳ ವಸ್ತುಗಳನ್ನು ಆಮದು ಮಾಡುವುದಿಲ್ಲ: ಬಹರೈನ್

Update: 2020-12-05 17:49 GMT

ಮನಾಮ (ಬಹರೈನ್), ಡಿ. 5: ಫೆಲೆಸ್ತೀನ್ ಭೂಭಾಗವನ್ನು ಅಕ್ರಮವಾಗಿ ಆಕ್ರಮಿಸಿ ನಿರ್ಮಿಸಲಾಗಿರುವ ಇಸ್ರೇಲಿ ಕಾಲನಿಗಳಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನು ಬಹರೈನ್ ಆಮದು ಮಾಡಿಕೊಳ್ಳುವುದಿಲ್ಲ ಎಂದು ಬಹರೈನ್‌ನ ಸರಕಾರಿ ಸುದ್ದಿ ಸಂಸ್ಥೆ ಬಿಎನ್‌ಎ ಶನಿವಾರ ವರದಿ ಮಾಡಿದೆ.

ಈ ವಾರದ ಆರಂಭದಲ್ಲಿ ಬಹರೈನ್‌ನ ಉದ್ಯಮ, ವಾಣಿಜ್ಯ ಮತ್ತು ಪ್ರವಾಸೋದ್ಯಮ ಸಚಿವ ಝಾಯಿದ್ ಬಿನ್ ರಶೀದ್ ಅಲ್-ಝಯಾನಿ, ಫೆಲೆಸ್ತೀನ್‌ನಲ್ಲಿರುವ ಇಸ್ರೇಲಿ ಕಾಲನಿಗಳಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಬಗ್ಗೆ ಬಹರೈನ್ ಮುಕ್ತ ಮನೋಭಾವ ಹೊಂದಿದೆ ಎಂದು ಹೇಳಿದ್ದರು. ವಸ್ತುಗಳನ್ನು ಇಸ್ರೇಲ್‌ನಲ್ಲಿ ಉತ್ಪಾದಿಸಲಾಗಿದೆಯೇ ಅಥವಾ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಅಥವಾ ಗೋಲನ್ ಹೈಟ್ಸ್‌ನಲ್ಲಿ ಉತ್ಪಾದಿಸಲಾಗಿದೆಯೇ ಎನ್ನುವುದನ್ನು ಬಹರೈನ್ ನೋಡುವುದಿಲ್ಲ ಎಂದು ಅವರು ಹೇಳಿದ್ದರು.

‘‘ಸಚಿವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಹಾಗೂ ವಿಶ್ವಸಂಸ್ಥೆಯ ನಿರ್ಣಯಗಳನ್ನು ಪಾಲಿಸುವ ನಮ್ಮ ನಿರ್ಧಾರ ಅಚಲ’’ ಎಂದು ಉದ್ಯಮ, ವಾಣಿಜ್ಯ ಮತ್ತು ಪ್ರವಾಸೋದ್ಯಮ ಸಚಿವಾಲಯದ ಅಧಿಕೃತ ಮೂಲ ಹೇಳಿದೆ ಎಂದು ಬಿಎನ್‌ಎ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News