ಭಾರತ ವಿರುದ್ಧ ಟ್ವೆಂಟಿ-20 ಸರಣಿಯಿಂದ ಮಿಚೆಲ್ ಸ್ಟಾರ್ಕ್ ಹೊರಕ್ಕೆ

Update: 2020-12-06 05:58 GMT

ಸಿಡ್ನಿ: ಕೌಟುಂಬಿಕ ಕಾರಣದಿಂದ ಆಸ್ಟ್ರೇಲಿಯದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಭಾರತ ವಿರುದ್ಧದ ಟ್ವೆಂಟಿ-20 ಸರಣಿಯ ಉಳಿದೆರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ. ಇದರಿಂದಾಗಿ ಆಸ್ಟ್ರೇಲಿಯ ತಂಡ ಮತ್ತೊಂದು ಹಿನ್ನಡೆ ಕಂಡಿದೆ.

ಆಸ್ಟ್ರೇಲಿಯದ ಕೋಚ್ ಜಸ್ಟಿನ್ ಲ್ಯಾಂಗರ್ ಸಹಾನುಭೂತಿ ನೆಲೆಯಲ್ಲಿ ಸ್ಟಾರ್ಕ್‌ಗೆ ಆಸ್ಟ್ರೇಲಿಯ ಕ್ರಿಕೆಟ್ ತಂಡದಿಂದ ಹೊರಗುಳಿಯಲು ಸಮ್ಮತಿ ನೀಡಿದ್ದಾರೆ.

 ನಾವು ಮಿಚೆಲ್‌ಗೆ ಅಗತ್ಯವಿರುವ ಎಲ್ಲ ಸಮಯವನ್ನು ನೀಡುತ್ತೇವೆ. ಅವರಿಗೆ ಹಾಗೂ ಅವರ ಕುಟುಂಬಕ್ಕೆ ಸಮಯ ಸೂಕ್ತವೆಂದು ಭಾವಿಸಿದಾಗಲೆಲ್ಲಾ ಅವರನ್ನು ಮತ್ತೆ ತಂಡಕ್ಕೆ ಸ್ವಾಗತಿಸುತ್ತೇವೆ ಎಂದು ಲ್ಯಾಂಗರ್ ಹೇಳಿದ್ದಾರೆ.

ಸ್ಟಾರ್ಕ್ ತಂಡದಿಂದ ಹಿಂದೆ ಸರಿಯುವುದರೊಂದಿಗೆ ಆಸ್ಟ್ರೇಲಿಯದ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಕಳೆದ ಕೆಲವು ಸಮಯದಿಂದ ಆಗಿರುವ ಹೊಸ ಬದಲಾವಣೆ ಇದಾಗಿದೆ. ಡೇವಿಡ್ ವಾರ್ನರ್ ಹಾಗೂ ಆಸ್ಟ್ರೇಲಿಯದ ಸ್ಪಿನ್ನರ್ ಅಶ್ಟನ್ ಅಗರ್ ಇಬ್ಬರೂ ಗಾಯಗೊಂಡಿದ್ದು, ವೇಗದ ಬೌಲರ್ ಪ್ಯಾಟ್ ಕಮಿನ್ಸ್‌ಗೆ ವಿಶ್ರಾಂತಿ ನೀಡಲಾಗಿದೆ.

ಭಾರತವು ಶುಕ್ರವಾರ ನಡೆದ ಮೊದಲ ಟ್ವೆಂಟಿ-20 ಪಂದ್ಯವನ್ನು 11 ರನ್‌ಗಳಿಂದ ರೋಚಕವಾಗಿ ಗೆದ್ದುಕೊಂಡಿತ್ತು. ಸಿಡ್ನಿಯಲ್ಲಿ ಇಂದು ಎರಡನೇ ಪಂದ್ಯ ನಡೆಯಲಿದೆ. ಬುಧವಾರ ಕೊನೆಯ ಹಾಗೂ 3ನೇ ಪಂದ್ಯ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News