ಡಿ.8 ರಂದು ಭಾರತ್ ಬಂದ್: ರೈತರಿಗೆ ಎಡಪಕ್ಷಗಳು, ಕಾರ್ಮಿಕ ಒಕ್ಕೂಟಗಳ ಬೆಂಬಲ
ಹೊಸದಿಲ್ಲಿ, ಡಿ. 6: ಕೃಷಿ ಕಾಯ್ದೆ ಹಿಂಪಡೆಯುವ ಕುರಿತು ಕೇಂದ್ರ ಸರಕಾರದೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ ಬಳಿಕವೂ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಒಕ್ಕೂಟ ಡಿಸೆಂಬರ್ 8ರಂದು ಭಾರತ್ ಬಂದ್‌ಗೆ ಕರೆ ನೀಡಿದೆ. ಈ ಕರೆಗೆ ಹಲವು ರಾಜಕೀಯ ಪಕ್ಷಗಳು ಹಾಗೂ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
‘ಭಾರತ್ ಬಂದ್’ಗೆ ಈಗಾಗಲೇ ಬಿಜೆಪಿಯೇತರ ಸರಕಾರಗಳು, ಎಡ ಸಂಘಟನೆಗಳು ಹಾಗೂ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಅಲ್ಲದೆ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಕೂಡ ಬೆಂಬಲ ವ್ಯಕ್ತಪಡಿಸಿದೆ.
ಇದಲ್ಲದೆ ತೃಣಮೂಲ ಕಾಂಗ್ರೆಸ್, ಎಡಪಕ್ಷಗಳು, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಹಾಗೂ 10 ಕೇಂದ್ರ ಕಾರ್ಮಿಕ ಸಂಘಟನೆಗಳು ‘ಭಾರತ್ ಬಂದ್’ಗೆ ಬೆಂಬಲ ಘೋಷಿಸಿವೆ.
ಎಡಪಕ್ಷಗಳು ‘ಭಾರತ್ ಬಂದ್’ಗೆ ಬೆಂಬಲ ಸೂಚಿಸಿದ್ದು, ರೈತರಿಗೆ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುವಂತೆ ಇತರ ರಾಜಕೀಯ ಪಕ್ಷಗಳಲ್ಲಿ ಮನವಿ ಮಾಡಿವೆ. ಸಿಪಿಐ, ಸಿಪಿಎಂ ಮತ್ತ್ತು ಸಿಪಿಎಂ (ಎಂಎಲ್), ಕ್ರಾಂತಿಕಾರಿ ಸಮಾಜವಾದಿ ಪಕ್ಷ ಹಾಗೂ ಅಖಿಲ ಭಾರತ ಫಾರ್ವಡ್ ಬ್ಲಾಕ್ ಬೆಂಬಲ ವ್ಯಕ್ತಪಡಿಸಿ ಹೇಳಿಕೆ ಬಿಡುಗಡೆ ಮಾಡಿವೆ.
ಐಎನ್‌ಟಿಯುಸಿ, ಎಐಟಿಯುಸಿ, ಎಚ್‌ಎಂಎಸ್, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ ಮೊದಲಾದ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ.