×
Ad

ಆರ್ ಜಿಸಿಬಿಗೆ ಆರೆಸ್ಸೆಸ್ ಮುಖಂಡನ ಹೆಸರಿಡಬೇಡಿ: ಕೇಂದ್ರಕ್ಕೆ ಕೇರಳ ಸಿಎಂ ಪತ್ರ

Update: 2020-12-06 14:48 IST

ತಿರುವನಂತಪುರ:ತಿರುನಂತಪುರದಲ್ಲಿರುವ ರಾಜೀವ್ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನಾಲಜಿ ಸಂಸ್ಥೆಗೆ(ಆರ್‌ಜಿಸಿಬಿ)ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಚಾರವಾದಿ ಎಂ.ಎಸ್.ಗೋಳ್ವಾಲ್ಕರ್‌ ಹೆಸರಿಡುವ ಮೂಲಕ ಮರು ನಾಮಕರಣ ಮಾಡದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರದ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಹರ್ಷ ವರ್ಧನ್ ಅವರಿಗೆ ಪತ್ರ ಬರೆದಿದ್ದಾರೆ.

ಆರ್‌ಜಿಸಿಬಿಯ ಎರಡನೇ ಕ್ಯಾಂಪಸ್‌ಗೆ "ಶ್ರೀಗುರುಜಿ ಮಾಧವ್ ಸದಾಶಿವ್ ಗೋಳ್ವಾಲ್ಕರ್ ನ್ಯಾಶನಲ್ ಸೆಂಟರ್ ಫಾರ್ ಕಾಂಪ್ಲೆಕ್ಸ್ ಡಿಸೀಸ್ ಇನ್ ಕ್ಯಾನ್ಸರ್ ಆ್ಯಂಡ್ ವೈರಲ್ ಇನ್‌ಫೆಕ್ಷನ್'' ಎಂದು ಮರು ನಾಮಕರಣ ಮಾಡಲಾಗುವುದು ಎಂದು ಹರ್ಷವರ್ಧನ್ ಶುಕ್ರವಾರ ಹೇಳಿದ್ದಾರೆ. ಡಿಸೆಂಬರ್ 22ರಿಂದ 25ರ ತನಕ ನಡೆೆಯಲಿರುವ ಭಾರತ ಅಂತರ್‌ರಾಷ್ಟ್ರೀಯ ವಿಜ್ಞಾನ ಉತ್ಸವ ಉದ್ಘಾಟಿಸಿ ಮಾತನಾಡುತ್ತಿದ್ದರು.

ಆರ್‌ಜಿಸಿಬಿಯನ್ನು ಆರಂಭದಲ್ಲಿ ರಾಜ್ಯ ಸರಕಾರ ನಡೆಸುತ್ತಿತ್ತು. ಇದನ್ನು ಸಂಶೋಧನೆ ಹಾಗೂ ಅಭಿವೃದ್ದಿಯಲ್ಲಿ ಅಂತರ್‌ರಾಷ್ಟ್ರೀಯ ಗುಣಮಟ್ಟವನ್ನು ಸಾಧಿಸುವ ಕೇಂದ್ರವಾಗಿ ಅಭಿವೃದ್ದಿಪಡಿಸುವ ಉದ್ದೇಶದಿಂದ ಭಾರತ ಸರಕಾರಕ್ಕೆ ಹಸ್ತಾಂತರಿಸಲಾಯಿತು. ಇದನ್ನು ಗಮನದಲ್ಲಿಟ್ಟುಕೊಂಡು ಕ್ಯಾಂಪಸ್‌ಗೆ ಪ್ರಸ್ತಾವಿತ ಹೆಸರಿನ ಬದಲು ಅಂತರ್‌ರಾಷ್ಟ್ರೀಯ ಖ್ಯಾತಿಯ ಕೆಲವು ಪ್ರಸಿದ್ಧ ಭಾರತೀಯ ವಿಜ್ಞಾನಿಗಳ ಹೆಸರನ್ನು ಇಡಬೇಕು ಎಂದು ಕೇರಳ ಸರಕಾರ ಅಭಿಪ್ರಾಯಪಟ್ಟಿದೆ ಎಂದು ಅವರು ಪಿಣರಾಯಿ ವಿಜಯನ್ ಪತ್ರದಲ್ಲಿ ಬರೆದಿದ್ದಾರೆ.

ರಾಜೀವ್‌ಗಾಂಧಿ ಬಯೋಟೆಕ್ನಾಲಜಿ ಸೆಂಟರ್‌ನ ಹೊಸ ಬ್ಲಾಕ್‌ಗೆ ಗೋಳ್ವಾಲ್ಕರ್ ಹೆಸರನ್ನು ಇಡುವ ಕೇಂದ್ರದ ಹೆಜ್ಜೆಯನ್ನು ತೀವ್ರವಾಗಿ ಟೀಕಿಸಿದ ಕೇರಳ ವಿಧಾನಸಭೆಯ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತಲ, ಗೋಳ್ವಾಲ್ಕರ್ ಹೆಸರನ್ನು ಇಡುವ ಮೊದಲು ಮೋದಿ ಸರಕಾರವು ಕೇರಳದ ಜನರಿಗೆ ಗೋಳ್ವಾಲ್ಕರ್ ಅವರು ನಮ್ಮರಾಷ್ಟ್ರಕ್ಕೆ ಕೊಟ್ಟ ಕೊಡುಗೆಯ ಬಗ್ಗೆ ವಿವರಿಸಬೇಕು ಎಂದರು.

ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡ ಸರಣಿ ಟ್ವೀಟ್‌ಗಳ ಮೂಲಕ ಸಂಸ್ಥೆಯ ಮರು ನಾಮಕರಣದ ಕ್ರಮವನ್ನು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News