×
Ad

​ದಲಿತರು ಅಂಬೇಡ್ಕರ್‌ರ ವಾರಸುದಾರರಾಗಬೇಕು: ಜಯನ್ ಮಲ್ಪೆ

Update: 2020-12-06 15:56 IST

ಮಲ್ಪೆ, ಡಿ.6: ದಲಿತ ಸಮುದಾಯಗಳಲ್ಲಿ ಏಕತೆ, ಸೈದ್ಧಾಂತಿಕ ಜಾಗೃತಿ ಮತ್ತಷ್ಟು ಸದೃಢವಾಗಬೇಕಾಗಿತ್ತು. ಆದರೆ ಇಡೀ ದಲಿತ ಸಮುದಾಯಗಳು ವಿಘಟನೆಯತ್ತ ಮುಖ ಮಾಡಿವೆಯೇ ಹೊರತು, ಐಕ್ಯ ಹೋರಾಟ ಕಟ್ಟುವತ್ತ ಮನಸ್ಸು ಮಾಡುತ್ತಿಲ್ಲ. ಇಂದಿನ ದಲಿತರು ನಿಜದ ಅರ್ಥದಲ್ಲಿ ಅಂಬೇಡ್ಕರ್‌ರ ಸೈದ್ಧಾಂತಿಕ ವಾರಸುದಾರರಾಗಬೇಕು ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆಅಭಿಪ್ರಾಯಿಸಿದ್ದಾರೆ.

ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ವತಿಯಿಂದ ಮಲ್ಪೆಗಾಂಧಿ ಶತಾಬ್ಧಿ ಶಾಲಾ ಮೈದಾನದಲ್ಲಿ ರವಿವಾರ ಆಯೋಜಿಸಲಾದ ಸಂವಿಧಾನದಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರ 64ನೆ ಪರಿನಿಬ್ಬಾಣ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ದಲಿತ ಸಂಘಟನೆಗಳು ಅಂಬೇಡ್ಕರ್‌ರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಅಂಬೇಡ್ಕರ್ ನಿರಂತರ ಪರಿವರ್ತನೆಗೆ ತನ್ನನ್ನ ತಾನು ಒಡ್ಡಿಕೊಳ್ಳುತ್ತಿ ದ್ದರು. ಅವರೆಂದೂ ನಿಂತ ನೀರಾಗಿರಲಿಲ್ಲ ಎಂದು ಅವರು ತಿಳಿಸಿದರು.

ಹಿರಿಯ ದಲಿತ ಮುಖಂಡ ಸುಂದರ್ ಕಪ್ಪೆಟ್ಟು ಮಾತನಾಡಿ, ಶೂದ್ರ ಹಿಂದೂ ಧರ್ಮ ಎಂದಿಗೂ ಸಮಾನತೆಯನ್ನು ಮುಂದಿಡುತ್ತದೆ. ವೈದಿಕ ಹಿಂದೂ ಧರ್ಮ ಸಮಾನತೆಯನ್ನು ನಾಶ ಮಾಡಿ ಭಿನ್ನಭೇಧವನ್ನು ಮುಂದಿಡುತ್ತದೆ ಎನ್ನುವುದನ್ನು ಎಲ್ಲರಿಗೆ ಮನವರಿಕೆ ಮಾಡಿಕೊಡಬೇಕು. ಹಿಂದೂ ಧರ್ಮವನ್ನು ಹೀಗೆ ಇಬ್ಬಾಗ ವಾಗಿ ನೋಡದೆ ಹೋದರೆ ನಾವು ಸಂವಿಧಾನವನ್ನು ಕಳೆದುಕೊಳ್ಳುತ್ತೇವೆ ಎಂದು ಹೇಳಿದರು.

ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷ ಹರೀಶ್ ಸಾಲ್ಯಾನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಅಂಬೇಡ್ಕರ್ ಯುವಸೇನೆಯ ಮಾರ್ಗದರ್ಶಿ ರಮೇಶ್ ಪಾಲ್, ಯುವಸೇನೆ ಮುಖಂಡರುಗಳಾದ ಮಂಜುನಾಥ ಕಪ್ಪೆಟ್ಟು, ವಾಸು ಮಾಸ್ತರ್, ದಯಾಕರ್ ಮಲ್ಪೆ, ರಾಮೋಜಿ, ಕೃಷ್ಣ ಶ್ರೀಯಾನ್, ದೀನೇಶ್ ಮೂಡುಬೇಟ್ಟು, ಗುಣವಂತ ತೊಟ್ಟಂ, ಸಂತೋಷ್ ಕಪ್ಪೆಟ್ಟು, ನಾರಾಯಣ ಕುಂದರ್, ಮುದ್ದು ಅಮೀನ್, ಆನಂದ ಸಾಲ್ಯಾನ್, ಶಾರದಾ ನೆರ್ಗಿ, ಶಶಿಕಲಾ ತೊಟ್ಟಂ ಮೊದಲಾದವರು ಉಪಸ್ಥಿತರಿದ್ದರು.

ದಲಿತ ಮುಖಂಡ ಗಣೇಶ್ ನೆರ್ಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಗವನ್ ನೆರ್ಗಿ ಸ್ವಾಗತಿಸಿದರು. ಪ್ರಸಾದ್ ಮಲ್ಪೆವಂದಿಸಿದರು. ಅಶೋಕ್ ಪುತ್ರನ್ ಕಾರ್ಯಕ್ರಮ ನಿರೂಪಿಸಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News