ಡಿ.8ರ ಭಾರತ್ ಬಂದ್‌ಗೆ ಸಿಐಟಿಯು ಬೆಂಬಲ
ಉಡುಪಿ, ಡಿ.6: ರೈತರ ಮುಂದಿನ ಹೋರಾಟದ ಭಾಗವಾಗಿ 300 ರೈತ ಸಂಘಟನೆಗಳು ವಿವಿಧ ಬೇಡಿಕೆಗಳಿಗಾಗಿ ಡಿ.8ರಂದು ಕರೆ ನೀಡಿರುವ ಜನತಾ ಕರ್ಫ್ಯೂ/ಅಖಿಲ ಭಾರತ ಬಂದ್‌ಗೆ ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ಬೆಂಬಲ ವ್ಯಕ್ತಪಡಿಸಿದೆ.
ಕೇಂದ್ರ ಸರಕಾರವು ರೈತ ವಿರೋಧಿ ಕಾಯಿದೆಗಳನ್ನು ವಾಪಾಸ್ಸು ಪಡೆಯಲು ವಿಶೇಷ ಅಧಿವೇಶನ ಕರೆಯುವಂತೆ ಆಗ್ರಹಿಸಿ ರೈತರು ದೆಹಲಿ ಯಲ್ಲಿ ಕಳೆದ 11 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಈ ಕಾಯಿದೆಗಳು ಜಾರಿಯಾದಲ್ಲಿ ಈಗಾ ಗಲೇ ಸಂಕಷ್ಟಕ್ಕೆ ಒಳಗಾಗಿರುವ ರೈತರು ಕಾರ್ಪೊರೇಟ್ ಕಂಪೆನಿಗಳ ಹಿಡಿತಕ್ಕೆ ಒಳಗಾಗುತ್ತಾರೆ. ಅದಾನಿ, ಅಂಬಾನಿಗಳ ಸೂಪರ್ ಲಾಭ ಹೆಚ್ಚುತ್ತದೆ. ದವಸ ಧಾನ್ಯಗಳ ಉತ್ಪಾದನೆ ತೀವ್ರವಾಗಿ ಕುಂಠಿತಗೊಳ್ಳುತ್ತದೆ.
ಆದುದರಿಂದ ಬಂದ್‌ಗೆ ಬೆಂಬಲವಾಗಿ ಡಿ.8ರಂದು ಜಿಲ್ಲೆಯ ಮೂರು ತಾಲೂಕುಗಳಲ್ಲಿ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದು ಸಿಐಟಿಯು ಉಡುಪಿ ಜಿಲ್ಲಾಧ್ಯಕ್ಷ ಕೆ.ಶಂಕರ್ ಹಾಗೂ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.