ಚಲಿಸುತ್ತಿದ್ದ ವ್ಯಾನ್‌ನಲ್ಲಿ ಬಾಲಕಿಯ ಸಾಮೂಹಿಕ ಅತ್ಯಾಚಾರ; ಆರೋಪ

Update: 2020-12-06 16:07 GMT

ಲಕ್ನೊ, ಡಿ.6: ತನ್ನನ್ನು ಅಪಹರಿಸಿದ ನಾಲ್ವರು ಯುವಕರು ಚಲಿಸುತ್ತಿದ್ದ ವ್ಯಾನ್‌ನಲ್ಲೇ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಉತ್ತರಪ್ರದೇಶದ ಛಟಾರಿ ಗ್ರಾಮದ ಬಾಲಕಿಯೊಬ್ಬಳು ದೂರು ನೀಡಿದ್ದಾಳೆ.

ಬಾಲಕಿ ನೀಡಿದ ಲಿಖಿತ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದ್ದು ಓರ್ವ ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಸಂತೋಷ್ ಕುಮಾರ್ ಸಿಂಗ್ ಹೇಳಿದ್ದಾರೆ. ಡಿಸೆಂಬರ್ 3ರಂದು ಅಂಗಡಿಗೆ ತೆರಳುತ್ತಿದ್ದ ಸಂದರ್ಭ ವ್ಯಾನ್‌ನಲ್ಲಿ ಬಂದ ನಾಲ್ಕು ಯುವಕರು ತನ್ನನ್ನು ಬಲವಂತವಾಗಿ ವ್ಯಾನ್‌ನೊಳಗೆ ತಳ್ಳಿ ಅಪಹರಿಸಿದ್ದಾರೆ. ಬಳಿಕ ವ್ಯಾನ್‌ನಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೆ, ಈ ಕೃತ್ಯವನ್ನು ವೀಡಿಯೊ ಚಿತ್ರೀಕರಿಸಿಕೊಂಡಿದ್ದಾರೆ. ಅತ್ಯಾಚಾರದ ಬಗ್ಗೆ ಬಾಯಿಬಿಟ್ಟರೆ ತಂದೆ ತಾಯಿಯನ್ನು ಕೊಲೆ ಮಾಡುವುದಾಗಿ ಎಚ್ಚರಿಸಿದ್ದಾರೆ. ಶನಿವಾರ ಬೆಳಿಗ್ಗೆ ಮತ್ತೆ ಮನೆಗೆ ಬಂದು ಬೆದರಿಸಿದ್ದಾರೆ ಎಂದು ಯುವತಿ ದೂರು ನೀಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಆದರೆ ಪೊಲೀಸರ ವಶದಲ್ಲಿರುವ ಆರೋಪಿ ಆರೋಪವನ್ನು ನಿರಾಕರಿಸಿದ್ದಾನೆ. ಬಾಲಕಿಯ ತಾಯಿ ದೀಪಾವಳಿ ಸಂದರ್ಭ ತನಗೆ 30,000 ರೂ. ಸಾಲ ದೊರಕಿಸಿಕೊಟ್ಟಿದ್ದು ಇದಕ್ಕೆ 2000 ರೂ. ಕಮಿಷನ್ ಪಾವತಿಸುವಂತೆ ಒತ್ತಾಯಿಸುತ್ತಿದ್ದಳು. ಈ ಬಗ್ಗೆ ಆಗಿಂದಾಗ್ಗೆ ಜಗಳ ನಡೆಯುತ್ತಿತ್ತು. ಶನಿವಾರವೂ ಇದೇ ವಿಷಯದಲ್ಲಿ ವಾಗ್ವಾದ ನಡೆದ ಬಳಿಕ ತನ್ನ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಲಾಗಿದೆ ಎಂದು ಆತ ಹೇಳಿಕೆ ನೀಡಿದ್ದು ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News