ಪಡುಬಿದ್ರಿಯಲ್ಲಿ ಮುಂಡಾಳ ಯುವ ವೇದಿಕೆ ಉದ್ಘಾಟನೆ
ಪಡುಬಿದ್ರಿ : ಜಾತಿ ಜಾತಿಗೂ ಇರುವ ಅಭಿವೃದ್ಧಿ ನಿಗಮವು ಮುಂಡಾಳ ಸಮಾಜಕ್ಕೂ ರಚನೆಯಾಗಬೇಕು ಎಂದು ಕಚ್ಚೂರು ಶ್ರೀ ಮಾಲ್ತಿದೇವಿ ಮತ್ತು ಬಬ್ಬು ಸ್ವಾಮಿ ಮೂಲಕ್ಷೇತ್ರದ ಅಧ್ಯಕ್ಷ ಗೋಕುಲ್‍ದಾಸ್ ಬಾರ್ಕೂರು ಒತ್ತಾಯಿಸಿದ್ದಾರೆ.
ರವಿವಾರ ಅಖಿಲ ಭಾರತ ಮುಂಡಾಲ ಯುವ ವೇದಿಕೆ ಮಾರ್ಗದರ್ಶನದಲ್ಲಿ ಸ್ಥಾಪಿತವಾದ ಪಡುಬಿದ್ರಿ ಮುಂಡಾಲ ಯುವ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ ಅಭಿವೃದ್ಧಿಗೆ ಸರಕಾರವು ಮುಂಡಾಲ ಅಭಿವೃದ್ಧಿ ನಿಗಮವನ್ನು ಅಗತ್ಯವಾಗಿ ಸ್ಥಾಪಿಸಬೇಕು. ಈ ಬಗ್ಗೆ 5 ಜಿಲ್ಲೆಗಳ ಮುಂಡಾಲ ಸಮಾಜದ ಮುಖ್ಯಸ್ಥರು ಸರಕಾರಕ್ಕೆ ಒತ್ತಡ ತರಲಾಗುವುದು ಎಂದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಈಗೀಗ ಅಷ್ಟೇನೂ ಸವಲತ್ತು ಸಿಗದ ಕಾರಣ ನಾವೂ ಜಾಗೃತರಾಗುತಿದ್ದೇವೆ. ಮುಂಡಾಲ ಸಮಾಜದ ಆರ್ಥಿಕ-ಸಾಮಾಜಿಕ-ಶೈಕ್ಷಣಿಕ ಸ್ಥಿತಿಗತಿಗಳ ಅಧ್ಯಯನಕ್ಕೆ ಯುವ ವೇದಿಕೆ ಕಾರ್ಯಸೂಚಿ ಹಮ್ಮಿಕೊಳ್ಳಬೇಕು. ಯುವಕರ ಸ್ಥಿತಿಗತಿಗಳ ಬಗ್ಗೆಯೂ ಅಧ್ಯಯನವಾಗಬೇಕು. ಈ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಿ ಹೆಚ್ಚು ಸಹಕಾರ ಸಿಗುವಂತೆ ಆಗ್ರಹಿಸಬೇಕು ಎಂದ ಅವರು ಸಂಘಟನೆಗೆ ಮಾನ್ಯತೆ ದೊರಕಲು ಸಮಾಜಕ್ಕೆ ಬೇಕಾದ ಕೊಡುಗೆಗಳನ್ನು ನೀಡಬೇಕೆಂದರು.
ಸಮಾರಂಭದ ವಿಶೇಷ ಆಹ್ವಾನಿತರಾದ ತುಳು ಜಾನಪದ ವಿದ್ವಾಂಸ ಕೆ.ಕೆ.ಪೇಜಾವರ್‍ರವರು ಅಜ ಕತ್ತಿ ದೈವದ ಕಲ ವಿಷಯದ ಬಗ್ಗೆ ಉಪ ನ್ಯಾಸ ನೀಡಿ, ಇಂದಿನ ಯುವ ಜನಾಂಗ ಆಧುನಿಕತೆಯ ಭರಾಟೆಯಲ್ಲಿ ದೈವಾರಾಧನೆಯನ್ನು ಬದಲಾವಣೆ ಮಾಡುವ ಬದಲು ಅದರ ಮೂಲ ಗಳನ್ನು, ಕಟ್ಟುಪಾಡುಗಳನ್ನು ಉಳಿಸಿ ಬೆಳೆಸುವ ಕಾರ್ಯ ಯುವ ಜನಾಂಗ ಮಾಡಬೇಕೆಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಂಕರ ಮಾಸ್ಟರ್‍ರವರು ಮುಂಡಾಲರ ಸಂಸ್ಕೃತಿ ವಿಷಯದ ಕುರಿತು ಉಪನ್ಯಾಸಗೈದರು.
ವೇದಿಕೆಯಲ್ಲಿ ನಿವೃತ್ತ ಉಪ ತಹಶೀಲ್ದಾರ್ ಪಿ. ಬಾಬು ಮಲ್ಲಾರ್, ಉಡುಪಿ ಜಿಲ್ಲಾ ಮುಂಡಾಳ ಮಹಾಸಭಾದ ಅಧ್ಯಕ್ಷ ಶಿವರಾಜ್ ಮಲ್ಲಾರ್, ಮುದರಂಗಡಿ ಪದವಿ ಪೂರ್ವ ಕಾಲೇಜಿನ ಸಹ ಶಿಕ್ಷಕಿ ಶಕಿಲಾ ಶೇಖರ್, ಕೃಷ್ಣ ಬಂಗೇರ ಪಡುಬಿದ್ರಿ, ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷ ಕೇಶವ ಸಾಲ್ಯಾನ್, ಕಮಲಾಕ್ಷ ಕಕ್ವ ಮತ್ತಿತರರಿದ್ದರು.
ಮಂಗಳೂರಿನ ಅಖಿಲ ಭಾರತ ಮುಂಡಾಳ ಯುವ ವೇದಿಕೆಯ ಅಧ್ಯಕ್ಷ ವಿನಯನೇತ್ರ ದಡ್ಡಲ್‍ಕಾಡ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಪಡುಬಿದ್ರಿ ಮುಂಡಾಳ ಯುವ ವೇದಿಕೆಯ ಅಧ್ಯಕ್ಷ ಪ್ರಸನ್ನ ಕುಮಾರ್ ಪ್ರಸ್ತಾವಿಸಿದರು. ಸಚೇಂದ್ರ ಅಂಬಾಗಿಲು ಕಾರ್ಯಕ್ರಮ ನಿರ್ವಹಿಸಿದರು. ನೂತನ ಘಟಕದ ಕಾರ್ಯದರ್ಶಿ ಸಂತೋಷ್ ನಂಬಿಯಾರ್ ಸ್ವಾಗತಿಸಿ ವಂದಿಸಿದರು. ಸಮಾರಂಭದಲ್ಲಿ ಮುಂಡಾಳ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿವಿಧ ಕೋರ್ದಬ್ಬು ದೈವಸ್ಥಾನದ ಅರ್ಚಕರ ಗೌರವ ಸಮರ್ಪಣೆಯನ್ನೂ ಗೈಯ್ಯಲಾಯಿತು.