ಕೋವಿಡ್ 20.7 ಕೋಟಿ ಜನರನ್ನು ಕಡು ಬಡತನಕ್ಕೆ ತಳ್ಳಲಿದೆ: ವಿಶ್ವಸಂಸ್ಥೆ

Update: 2020-12-06 17:19 GMT

ವಿಶ್ವಸಂಸ್ಥೆ, ಡಿ. 6: ಕೊರೋನ ಸೋಂಕಿನ ದೀರ್ಘಕಾಲದ ಪ್ರಭಾವ 2030ರ ಹೊತ್ತಿಗೆ ಹೆಚ್ಚುವರಿಯಾಗಿ 20.7 ಕೋಟಿ ಜನರನ್ನು ಕಡು ಬಡತನಕ್ಕೆ ತಳ್ಳಲಿದೆ. ಇದರಿಂದ ವಿಶ್ವದ ಕಡು ಬಡವರ ಸಂಖ್ಯೆ 1 ಶತಕೋಟಿಗೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆಯ ಅಭಿವೃದ್ದಿ ಕಾರ್ಯಕ್ರಮ (ಯುಎನ್‌ಡಿಪಿ)ದ ಹೊಸ ಅಧ್ಯಯನವೊಂದು ಹೇಳಿದೆ.

ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿಗಳು)ಗಳ ಮೇಲೆ ವಿವಿಧ ಕೊರೋನ ಚೇತರಿಕೆ ಪರಿಸ್ಥಿತಿ ಬೀರಿದ ಪರಿಣಾಮವನ್ನು ಈ ಅಧ್ಯಯನ ಅಂದಾಜಿಸಿದೆ. ಮುಂದಿನ ದಶಕದಲ್ಲಿ ಸಾಂಕ್ರಾಮಿಕ ರೋಗದ ಬಹು ಆಯಾಮಗಳ ಪರಿಣಾಮಗಳನ್ನು ಕೂಡ ಈ ಅಧ್ಯಯನ ವಿಶ್ಲೇಷಿಸಿದೆ.

ಈ ಅಧ್ಯಯನ ಡೆನ್ವೆರ್ ವಿಶ್ವವಿದ್ಯಾನಿಲಯದ ಪಾರ್ಡಿ ಸೆಂಟರ್ ಫಾರ್ ಇಂಟರ್‌ನ್ಯಾಷನಲ್ ಫ್ಯೂಚರ್ ಹಾಗೂ ಯುಎನ್‌ಡಿಪಿಯ ನಡುವಿನ ದೀರ್ಘಕಾಲೀನ ಪಾಲುದಾರಿಕೆಯ ಭಾಗವಾಗಿದೆ.

ಚೇತರಿಕೆ ಗೆ ದೀರ್ಘ ಕಾಲ ಬೇಕಾಗುವ ‘ತೀವ್ರ ಹಾನಿ ’ ಪರಿಸ್ಥಿತಿ ಸಂದರ್ಭ ಕೋವಿಡ್ ಹೆಚ್ಚುವರಿ 20.7 ಕೋಟಿ ಜನರನ್ನು 2030ರ ಹೊತ್ತಿಗೆ ಕಡು ಬಡತನಕ್ಕೆ ತಳ್ಳುವ ಸಾಧ್ಯತೆ ಇದೆ. ಅಲ್ಲದೆ ‘ತೀವ್ರ ಹಾನಿ’ ಪರಿಸ್ಥಿತಿಗೆ ಹೋಲಿಸಿದರೆ ಮಹಿಳಾ ಬಡತನ ಹೆಚ್ಚುವರಿ 10.2 ಕೋಟಿಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

ಕೋವಿಡ್ ಸಾಂಕ್ರಾಮಿಕ ರೋಗದ ಅವಧಿಯಲ್ಲಿ ಉತ್ಪಾದಕತೆಯಲ್ಲಿ ತೀವ್ರ ಕುಸಿತ ಉಂಟಾಗಿರುವುದರಿಂದ ಈ ‘ತೀವ್ರ ಹಾನಿ’ ಪರಿಸ್ಥಿತಿಯಿಂದಾದ ಶೇ. 80ರಷ್ಟು ಆರ್ಥಿಕ ಬಿಕ್ಕಟ್ಟು ಮುಂದಿನ 10 ವರ್ಷಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ. ಆದುದರಿಂದ ಸಾಂಕ್ರಾಮಿಕ ರೋಗದ ಹಿಂದಿನ ಸ್ಥಿತಿಗೆ ಸಂಪೂರ್ಣವಾಗಿ ಮರಳಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.

 ಸಾಮಾಜಿಕ ರಕ್ಷಣೆ/ಕಲ್ಯಾಣ ಕಾರ್ಯಕ್ರಮಗಳು, ಆಡಳಿತ, ಡಿಜಿಟಲೀಕರಣ ಹಾಗೂ ಹಸಿರು ಆರ್ಥಿಕತೆಯ ಮೇಲೆ ಸುಸ್ಥಿರ ಆರ್ಥಿಕ ಗುರಿ (ಎಸ್‌ಡಿಎಸ್)ಗಳನ್ನು ಮುಂದಿನ ದಶಕಗಳಲ್ಲಿ ಸಾಧಿಸುವ ಮೂಲಕ ಕಡು ಬಡತನವನ್ನು ನಿವಾರಿಸಬಹುದು. ಅಲ್ಲದೆ, ಅಭಿವೃದ್ಧಿ ಪಥವನ್ನು ಮೊದಲಿನ ದಾರಿಗೆ ತರಬಹುದು ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News