ಭಾರತೀಯ ರೈತರನ್ನು ಬೆಂಬಲಿಸಿ ಲಂಡನ್‍ನಲ್ಲಿ ಸಾವಿರಾರು ಮಂದಿಯಿಂದ ಪ್ರತಿಭಟನೆ; ಹಲವರ ಬಂಧನ
ಲಂಡನ್ : ಭಾರತದಲ್ಲಿ ರೈತರ ಭಾರೀ ಪ್ರತಿಭಟನೆಗೆ ಕಾರಣವಾದ ಕೇಂದ್ರ ಸರಕಾರ ಜಾರಿಗೊಳಿಸಿದ ಕೃಷಿ ಕಾನೂನುಗಳನ್ನು ವಿರೋಧಿಸಿ ಕೇಂದ್ರ ಲಂಡನ್‍ನಲ್ಲಿ ರವಿವಾರ ಸಾವಿರಾರು ಜನರು ಪ್ರತಿಭಟಿಸಿದ್ದಾರೆ. ಈ ಸಂದರ್ಭ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಹಲವಾರು ಮಂದಿಯನ್ನು ಪೊಲೀಸರು ಬಂಧಿಸಿದರು.
ಲಂಡನ್‍ನಲ್ಲಿನ ಭಾರತೀಯ ರಾಯಭಾರ ಕಚೇರಿಯೆದುರು ಸೇರಿದ ಪ್ರತಿಭಟನಾಕಾರರು ಟ್ರಫಲ್ಗರ್ ಸ್ಕ್ವೇರ್ ಪ್ರದೇಶದ ಸುತ್ತ ಮೆರವಣಿಗೆಯನ್ನೂ ನಡೆಸಿದರು. "ನಾವು ರೈತರ ಜತೆಗಿದ್ದೇವೆ'' ಎಂದು ಘೋಷಣೆಗಳನ್ನು ಕೂಗಿದರು. ಪ್ರತಿಭಟನಾಕಾರರಲ್ಲಿ ಹೆಚ್ಚಿನವರು ಬ್ರಿಟಿಷ್ ಸಿಖ್ಖರಾಗಿದ್ದು 'ಜಸ್ಟಿಸ್ ಫಾರ್ ಫಾರ್ಮರ್ಸ್' ಮುಂತಾದ ಘೊಷವಾಕ್ಯಗಳನ್ನು ಬರೆದಿದ್ದ ಪೋಸ್ಟರುಗಳನ್ನು ಕೈಗಳಲ್ಲಿ ಹಿಡಿದು ರಸ್ತೆ ತಡೆ ನಡೆಸಿದರು.
ಬ್ರಿಟಿಷ್ ಸಿಖ್ ಲೇಬರ್ ಪಾರ್ಟಿ ಸಂಸದ ತನ್ಮಜೀತ್ ಸಿಂಗ್ ದೇಸಿ ಅವರ ನೇತೃತದಲ್ಲಿ 36 ಬ್ರಿಟಿಷ್ ಸಂಸದರು ದೇಶದ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರಿಗೆ ಪತ್ರ ಬರೆದು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಜತೆ ರೈತ ಪ್ರತಿಭಟನೆಗಳ ಕುರಿತಂತೆ ಮಾತನಾಡಬೇಕೆಂದು ಕೋರಿದ ನಂತರ ಈ ಪ್ರತಿಭಟನೆ ನಡೆದಿದೆ.