ಡಿ.18: ‘ಮರೆಯಲಾಗದ ದಿವಂಗತ ಬ್ಯಾರಿ ಮಹನೀಯರು’, ‘ಬ್ಯಾರಿ ಹಿರಿಯರ ಮನದಾಳದ ಮಾತು’ ಸಾಕ್ಷ್ಯಚಿತ್ರ ಡಿವಿಡಿ ಬಿಡುಗಡೆ
ಮಂಗಳೂರು, ಡಿ.7: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಡಿ.18ರಂದು ಸಂಜೆ 4ಗಂಟೆಗೆ “ಮರೆಯಲಾಗದ ದಿವಂಗತ ಬ್ಯಾರಿ ಮಹನೀಯರು ಐತಿಹಾಸಿಕ ಗ್ರಂಥ ಮತ್ತು ಬ್ಯಾರಿ ಹಿರಿತರ ಮನದಾಳದ ಮಾತು ಸಾಕ್ಷ್ಯಚಿತ್ರ ಡಿವಿಡಿ ಬಿಡುಗಡೆ” ಕಾರ್ಯಕ್ರಮವು ನಗರದ ಹೋಟೆಲ್ ಶ್ರೀನಿವಾಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮರೆಯಲಾಗದ ಗ್ರಂಥವನ್ನು ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ ಬಿಡುಗಡೆ ಮಾಡಲಿರುವರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಬ್ಯಾರಿ ಹಿರಿಯರ ಮನದಾಳದ ಮಾತು ಸಾಕ್ಷ್ಯಚಿತ್ರ ಡಿವಿಡಿ ಬಿಡುಗಡೆ ಮಾಡಲಿದ್ದು, ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಶುಭಾಶಂಸನೆ ಮಾಡಲಿರುವರು.
ಬ್ಯಾರಿ ಕಲಾರಂಗದ ಅಧ್ಯಕ್ಷ ಅಝೀಝ್ ಬೈಕಂಪಾಡಿ, ಮಂಗಳೂರು ವಿಶ್ವವಿದ್ಯಾನಿಲಯ ಬ್ಯಾರಿ ಅಧ್ಯಯನ ಪೀಠದ ಮುಖ್ಯಸ್ಥ ಡಾ.ಅಬೂಬಕ್ಕರ್ ಸಿದ್ದೀಕ್, ಬ್ಯಾರಿ ಅಧ್ಯಯನ ಪೀಠದ ಸದಸ್ಯ ಎಮ್. ಅಹ್ಮದ್ ಬಾವ ಮೊಹಿದಿನ್ಮು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ರಿಜಿಸ್ಟ್ರಾರ್ ಪೂರ್ಣಿಮಾ, ಸದಸ್ಯರಾದ ಶಂಶೀರ್ ಬುಡೋಳಿ, ಮರಕೊಗು ಆವಾತೊ ಮರ್ಹೂಂ ಬ್ಯಾರಿಙ ಗ್ರಂಥದ ಆಯ್ಕೆ ಸಮಿತಿಯ ಸದಸ್ಯರಾದ ಅಹ್ಮದ್ ಬಾವಾ ಪಡೀಲ್, ನೂರುದ್ದೀನ್ ಸಾಲ್ಮರ ಉಪಸ್ಥಿತರಿದ್ದರು.