ಹಿರಿಯ ಸಾಹಿತಿ, ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ ನಿಧನ
ಉಡುಪಿ, ಡಿ.7: ಕನ್ನಡದ ಪ್ರಮುಖ ಕವಿ, ಕಥೆಗಾರ ಹಾಗೂ ರಂಗಕರ್ಮಿಯಾಗಿದ್ದ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಾವರ ಮಾಧವ ಆಚಾರ್ಯ (80) ಇಂದು ಅಪರಾಹ್ನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.
ಮಾಧವ ಆಚಾರ್ಯ ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರು ಹಾಗೂ ಅಪಾರ ಸಂಖ್ಯೆಯ ಶಿಷ್ಯರು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ. ಅವರು ಕಥೆಗಾರರಾಗಿ, ಲೇಖಕರಾಗಿ, ರಂಗ ನಿರ್ದೇಶಕರು, ನಟರಾಗಿ, ಗೀತನಾಟಕಗಳ ನಿರ್ದೇಶಕರಾಗಿ ಪ್ರಸಿದ್ದರಾಗಿದ್ದರು. ಯಕ್ಷಗಾನದ ಕುರಿತಂತೆಯೂ ಅವರು ಅಪಾರ ತಿಳುವಳಿಕೆ ಹೊಂದಿದ ವಿದ್ವಾಂಸರಾಗಿದ್ದರು.
1941 ಮಾ.25ರಂದು ಜನಿಸಿದ ಮಾಧವ ಆಚಾರ್ಯರ ತಂದೆ ಲಕ್ಷ್ಮೀನಾರಾಯಣ ಆಚಾರ್ಯರು ತಮಿಳುನಾಡಿನಲ್ಲಿ ಸಂಸ್ಕೃತ ಉಪನ್ಯಾಸಕ ರಾಗಿದ್ದು, ಸಂಸ್ಕೃತದಲ್ಲಿ ‘ರಾಸವಿಲಾಸ’ಎಂಬ ಕೃತಿಯನ್ನು ರಚಿಸಿದ್ದರು. ತಾಯಿ ಯು.ಲಲಿತಾಲಕ್ಮೀ ಕುಶಲಕಲೆಗಳಲ್ಲಿ ಪರಿಣಿತರು. ಉಡುಪಿ ಸಮೀಪದ ಕಲ್ಯಾಣಪುರದಲ್ಲಿ ಆರಂಭಿಕ ವಿದ್ಯಾಭ್ಯಾಸ ಪಡೆದ ಅವರು ಎಂಜಿಎಂ ಕಾಲೇಜಿ ನಿಂದ ಬಿ.ಎ ಪದವಿಯನ್ನೂ, ಬೆಂಗಳೂರು ವಿವಿಯಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು.
ಕುಂದಾಪುರದ ಭಂಡಾರ್‌ಕರ್ಸ್ ಕಾಲೇಜಿನಲ್ಲಿ ತಮ್ಮ ಉಪನ್ಯಾಸಕ ವೃತ್ತಿಯನ್ನು ಆರಂಭಿಸಿದ ಅವರು ಮುಂದೆ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ 30 ವರ್ಷಗಳ ಕಾಲ ಅರ್ಥಶಾಸ್ತ್ರ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಬಳಿಕ ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು.
ಅಧ್ಯಾಪನ ಅವರ ವೃತ್ತಿಯಾದರೆ, ಕಲೆ, ಸಾಹಿತ್ಯ, ಸಂಗೀತ-ನಾಟಕಗಳು ಅವರ ಪ್ರವೃತ್ತಿ. ಕಳೆದ ಶತಮಾನದ 70ರ ದಶಕದಿಂದ ಅವರು ಸಣ್ಣ ಕಥೆ, ಗೀತ ನಾಟಕ, ನಟನೆ, ನಿರ್ದೇಶನದ ಮೂಲಕ ಉಡುಪಿಯಲ್ಲಿ ಸಾಂಸ್ಕೃತಿಕ ಚಳವಳಿ ಸದಾ ನಳನಳಿಸುವಂತೆ ನೋಡಿಕೊಂಡಿದ್ದರು. ನಿವೃತ್ತಿಯ ಬಳಿಕ ಅವರು ತಮ್ಮ ಸಮೂಹ ಸಂಸ್ಥೆಯ ಮೂಲಕ ಹತ್ತಾರು ಗೀತ ನಾಟಕ, ನೃತ್ಯ ರೂಪಕಗಳನ್ನು ನಿರ್ದೇಶಿಸಿದ್ದರು. ಇವುಗಳಲ್ಲಿ ಅಹಲ್ಯಾ, ಚಿತ್ರಾಂಗಧೆ, ಶಬರಿ, ಮತ್ತೆ ರಾಮನ ಕಥೆ ಇವು ಪ್ರಮುಖವಾದವು.
ಸಾಹಿತ್ಯ ಕೃತಿಗಳು: ಬಾಗಿದ ಮರ, ಭಾಗ ದೊಡ್ಡಮ್ಮನ ಕಥೆ, ಅಪರಾಧ ಸಹಸ್ರಾಣಿ ಕಥೆ, ಸಮಗ್ರ ಕಥಾಸಂಕಲನಗಳು, ಪ್ರಬಂಧ ಸಂಕಲನ ಗಳು, ಬೆಳಕಿನೆಡೆಗೆ, ನೀಡು ಪಾಥೇಯವನು, ಸೀಳು ಬಿದಿರಿನ ಸಿಳ್ಳು, ಹಾಡಿ, ಸಾಹಿತ್ಯ ಸ್ಪಂದನ, ಲಘು ಬಿಗು ಪ್ರಬಂಧಗಳು ಇವರ ಗದ್ಯ ಕೃತಿಗಳಾದರೆ, ರಂಗಸ್ಥಳದ ಕನವರಿಕೆಗಳು, ಹೂ ಮಿಡಿ ಹಾಡು ಕವನ ಸಂಕಲನಗಳು.
ಇನ್ನು ನಾಟಕಗಳು, ಗೀತಾ ನಾಟಕಗಳು, ನೃತ್ಯ ರೂಪಕಗಳನ್ನೂ ಇವರು ರಚಿಸಿ, ನಿರ್ದೇಶಿಸಿದ್ದಾರೆ. ಗೋಡೆ, ಕೃಷ್ಣನ ಸೋಲು, ರಾಣಿ ಅಬ್ಬಕ್ಕದೇವಿ, ಗಾಂಧಾರಿ, ರಾಧೆ ಎಂಬ ಗಾದೆ, ನೆನಪೆಂಬ ನವಿಲುಗರಿ ಇವರ ನಾಟಕಗಳು. ಅಂಧಯುಗ, ಬ್ರಹ್ಮಕಪಾಲ, ಅರುಂಧತಿ, ಹಂಸದಮಯಂತಿ, ಅಶ್ವತ್ಥಾಮನ್, ಹೆಬ್ಬೆರಳು, ಸತ್ಯಾಯನ ಹರಿಶ್ಚಂದ್ರ, ಶ್ರೀಹರಿಚರಿತೆ, ಸೀತಾಪಹರಣ, ಕುಚೇಲ ಕೃಷ್ಣ ಇವರ ಕೆಲವು ಗೀತ ನಾಟಕಗಳು.
ಮಂಗಳೂರು ಆಕಾಶವಾಣಿಯ ಕಲಾವಿದರಾಗಿರುವ ಇವರ ಸಣ್ಣ ಕಥೆಗಳು, ಗೀತರೂಪಕಗಳು, ಚಿಂತನಗಳು ಆಕಾಶವಾಣಿಯಲ್ಲಿ ಪ್ರಸಾರ ವಾಗಿವೆ. ಮಾಧವ ಆಚಾರ್ಯರು ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದು, ಸದಾನಂದ ಸುವರ್ಣ ಇವರ ‘ಗುಡ್ಡದ ಭೂತ’ ಧಾರವಾಹಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದು ಜನಪ್ರಿಯತೆ ಪಡೆದಿತ್ತು.
ಪ್ರಶಸ್ತಿಗಳು: 1999ರಲ್ಲಿ ಮಾಧವ ಆಚಾರ್ಯರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ರಂಗಭೂಮಿ ಕಲಾ ಸಂಸ್ಥೆಯಿಂದ ‘ರಂಗವಿಶಾರದ’, 1997ರ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಗಿತ್ತು. ಅಲೆವೂರು ಗ್ರೂಫ್ ಅವಾರ್ಡ್‌ನ್ನು ಅವರು ಪಡೆದಿದ್ದರು.
ಕಾಂತಾವರ ಕನ್ನಡ ಸಂಘ 2020ನೇ ಸಾಲಿನ ಮೊಗಸಾಲೆ ಪ್ರತಿಷ್ಠಾನದ ದತ್ತಿನಿಧಿಯ ಕಾಂತಾವರ ಲಲಿತಕಲಾ ಪ್ರಶಸ್ತಿಗೆ ಉದ್ಯಾವರ ಮಾಧವ ಆಚಾರ್ಯರನ್ನು ಆಯ್ಕೆ ಮಾಡಿತ್ತು. ಡಿ.13ರಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡುವುದಾಗಿ ಡಾ.ನಾ. ಮೊಗಸಾಲೆ ತಿಳಿಸಿದ್ದಾರೆ.
ಸಂತಾಪ: ಮಣಿಪಾಲ ಆಸ್ಪತ್ರೆಯಲ್ಲಿ ಇಂದು ನಿಧನರಾದ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕ ಪ್ರೊ.ಉದ್ಯಾವರ ಮಾಧವ ಆಚಾರ್ಯರ ನಿಧನಕ್ಕೆ ಉಡುಪಿಯ ರಥಬೀದಿ ಗೆಳೆಯರು ಸಂಘಟನೆ, ಪೂರ್ಣಪ್ರಜ್ಞ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ.ಬಿ.ಎನ್.ಸೋಮಯಾಜಿ, ಕಾರ್ಯದರ್ಶಿ ಮುರಲಿ ಕಡೆಕಾರ್ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎ.ರಾಘವೇಂದ್ರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಉಡುಪಿಯ ಯಕ್ಷಗಾನ ಕಲಾರಂಗದ ಸದಸ್ಯರಾಗಿದ್ದ ಮಾಧವ ಆಚಾರ್ಯರ ನಿಧನಕ್ಕೆ ಅಧ್ಯಕ್ಷ ಎಂ.ಗಂಗಾಧರರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ಸೂಚಿಸಿದ್ದಾರೆ.
ಆಚಾರ್ಯರ ನಿಧನಕ್ಕೆ ಅದಮಾರು ಮಠ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಶ್ರೀವಿಶ್ವಪ್ರಿಯತೀರ್ಥರು, ಕಾರ್ಯಾಧ್ಯಕ್ಷರಾದ ಪರ್ಯಾಯ ಶ್ರೀಈಶಪ್ರಿಯತೀರ್ಥರು, ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು, ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥರು, ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು, ಸೋದೆ ಮಠದ ಶ್ರೀವಿಶ್ವವಲ್ಲಭತೀರ್ಥರು, ಶಾಸಕ ಕೆ.ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸಂತಾಪ ಸೂಚಿಸಿದ್ದಾರೆ.