×
Ad

ಬೈಂದೂರು: ಬೀಚ್ ಕ್ಲೀನ್ ಮಾಡಿ ಮಾದರಿಯಾದ ನವವಿವಾಹಿತ ಜೋಡಿ !

Update: 2020-12-07 19:01 IST

ಬೈಂದೂರು, ಡಿ.7: ಮದುವೆ ಸಂಭ್ರದಲ್ಲಿರುವ ನವವಿವಾಹಿತ ಜೋಡಿ ಯೊಂದು ತಮ್ಮ ಹನಿಮೂನ್ ಕಾರ್ಯಕ್ರಮವನ್ನು ಮುಂದೂಡಿ ಬೀಚ್ ಸ್ವಚ್ಛಗೊಳಿಸುವ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಾದರಿಯಾಗಿದೆ.

ಬೈಂದೂರು ತಾಲೂಕಿನ ಕಳವಾಡಿ ನಿವಾಸಿಯಾಗಿರುವ ಅನುದೀಪ್ ಹೆಗ್ಡೆ ಮತ್ತು ಮಿನುಷಾ ಕಾಂಚನ್ ದಂಪತಿ ಒಂಭತ್ತು ದಿನಗಳ ಕಾಲ ಬೈಂದೂರಿನ ಸೋಮೇಶ್ವರ ಕಡಲ ತೀರವನ್ನು ಸ್ವಚ್ಛಗೊಳಿಸಿ ಸುಮಾರು 600-700ಕೆ.ಜಿ.ಗೂ ಅಧಿಕ ಕಸವನ್ನು ಸಂಗ್ರಹಿಸಿ ವಿಲೇವಾರಿ ಮಾಡಿದ್ದಾರೆ.

ಆನ್‌ಲೈನ್ ಮೂಲಕ ಡಿಜಿಟಲ್ ಮಾರ್ಕೆಟಿಂಗ್ ವೃತ್ತಿ ಮಾಡಿಕೊಂಡಿರುವ ಅನುದೀಪ್ ಹೆಗ್ಡೆ, ಮೈಸೂರಿನ ಫಾರ್ಮಾಸಿಟಿಕಲ್ ಕಂಪೆನಿಯ ಉದ್ಯೋಗಿ ಯಾಗಿರುವ ಉಡುಪಿ ನಿವಾಸಿ ಮಿನುಷಾರನ್ನು ನ.18ರಂದು ಮದುವೆಯಾಗಿ ದ್ದರು. ಮದುವೆಯ ಬಳಿಕ ಸೋಮೇಶ್ವರ ಬೀಚ್‌ಗೆ ವಿವಾಹಕ್ಕೆ ತೆರಳಿದ್ದ ಜೋಡಿ ಅಲ್ಲಿನ ಕಸದ ರಾಶಿಯನ್ನು ಕಂಡು, ಬೀಚ್ ಸ್ವಚ್ಛಗೊಳಿಸುವ ನಿರ್ಧಾರ ಮಾಡಿದ್ದರು. ಅದಕ್ಕಾಗಿ ಅವರು ತಮ್ಮ ಹನಿಮೂನ್ ಕಾರ್ಯಕ್ರಮವನ್ನು ಕೂಡ ಮುಂದೂಡಿದರು.

ಹೀಗೆ ನವಜೋಡಿ ನ.27ರಿಂದ ಡಿ.5ರವರೆಗೆ ಬೀಚ್ ಸ್ವಚ್ಛ ಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿತು. ಇವರು ಈ ಕಡಲತೀರದ ಸುಮಾರು 700 ಮೀಟರ್ ದೂರವರೆಗೆ ಸ್ವಚ್ಛತಾ ಕಾರ್ಯವನ್ನು ನಡೆಸಿದ್ದಾರೆ. ಅದಕ್ಕಾಗಿ ಪ್ರತಿದಿನ ಎರಡು ಗಂಟೆ ಅವಧಿಯನ್ನು ಮೀಸಲಿರಿಸುತ್ತಿದ್ದರು. ಬೀಚ್‌ನಲ್ಲಿ ಸಿಕ್ಕಿದ ಮದ್ಯದ ಬಾಟಲಿಗಳು, ಪಾದರಕ್ಷೆಗಳು ಸಹಿತ ಅಪಾರ ಪ್ರಮಾಣದ ತ್ಯಾಜ್ಯ ವಸ್ತುಗಳನ್ನು ಒಗ್ಗೂಡಿಸಿದ್ದಾರೆ. ಇವರ ಈ ಸಾಮಾಜಿಕ ಕಾರ್ಯದಲ್ಲಿ ಬೈಂದೂರಿನ ಮಂಜುನಾಥ್ ಶೆಟ್ಟಿ ಹಾಗೂ ಹಸನ್ ಕೂಡ ಭಾಗಿಯಾಗಿದ್ದರು.

ಕೊರೋನ ಬಳಿಕ ಪತ್ನಿ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದಾರೆ. ಮದುವೆಯಾಗಿ ಬೀಚ್‌ಗೆ ತೆರಳಿದ್ದಾಗ ನಾವಿಬ್ಬರು ಕುಳಿತು ಹನಿಮೂನ್ ಹೋಗುವ ಪ್ಲಾನ್ ಹಾಕುತ್ತಿದ್ದೆವು. ಆಗ ಅಲ್ಲಿನ ಪರಿಸ್ಥಿತಿ ನೋಡಿ ಹನಿಮೂನ್ ಮುಂದೂಡಿ, ಬೀಚ್ ಸ್ವಚ್ಛಗೊಳಿಸುವ ತೀರ್ಮಾನವನ್ನು ನಾವಿಬ್ಬರು ಮಾಡಿದೆವು. ನಾನು ಹುಟ್ಟಿ ಬೆಳೆದದ್ದು ಇದೇ ಬೀಚ್‌ನಲ್ಲಿ. ಅದಕ್ಕೆ ನನ್ನಿಂದ ಏನಾದರೂ ಕೊಡುಗೆ ನೀಡುವ ಎಂಬ ಭಾವನೆಯಿಂದ ಈ ಕಾರ್ಯ ಮಾಡಿದ್ದೇವೆ.
-ಅನುದೀಪ್ ಹೆಗ್ಡೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News