×
Ad

ಡಿ.8ರಂದು ಭಾರತ್ ಬಂದ್ : ದ.ಕ. ಜಿಲ್ಲೆಯ ವಿಪಕ್ಷಗಳ ಸಹಿತ ಹಲವು ಸಂಘಟನೆಗಳು ಬೆಂಬಲ

Update: 2020-12-07 20:03 IST

ಮಂಗಳೂರು, ಡಿ.7: ಕೇಂದ್ರ ಸರಕಾರದ ರೈತ ಮಸೂದೆ ವಿರೋಧಿಸಿ ರೈತ ಸಂಘಟನೆಗಳು ಡಿ.8ರಂದು ದ.ಕ. ಜಿಲ್ಲೆಯಲ್ಲೂ ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಿವೆ.

ಮಂಗಳೂರು ಸಂಪರ್ಕಿಸುವ ಮೂರು ಕಡೆಗಳಲ್ಲಿ ರಸ್ತೆ ತಡೆ ಹೊರತುಪಡಿಸಿದರೆ ಬಲಾತ್ಕಾರದ ಬಂದ್ ಸಾಧ್ಯತೆ ಇಲ್ಲ. ಬಂದ್‌ಗೆ ವಿಪಕ್ಷಗಳ ಸಹಿತ ಹಲವು ಸಂಘಟನೆಗಳು ಕೂಡ ಬೆಂಬಲ ವ್ಯಕ್ತಪಡಿಸಿವೆ.

ರೈತ ಸಂಘ, ಹಸಿರು ಸೇನೆ, ಪ್ರಾಂತ ರೈತ ಸಂಘ, ವಿದ್ಯಾರ್ಥಿ, ಯುವ, ದಲಿತ ಸಂಘಟನೆಗಳು ಡಿ.8ರಂದು ಬೆಳಗ್ಗೆ 10 ಗಂಟೆಗೆ ಮಂಗಳೂರಿನ ನಂತೂರು ಜಂಕ್ಷನ್, ಉಪ್ಪಿನಂಗಡಿ ಹಾಗೂ ಬೆಳ್ತಂಗಡಿಗಳಲ್ಲಿ ರಸ್ತೆ ತಡೆ ನಡೆಸಲು ತೀರ್ಮಾನಿಸಿವೆ. ಮಂಗಳೂರು ಬಂದರು ಶ್ರಮಿಕರ ಸಂಘವು ಕೂಡ ನಗರದ ಹಳೆ ಬಂದರು ಕಾರ್ಮಿಕ ಕಟ್ಟೆಯ ಸಮೀಪ ಬೆಳಗ್ಗೆ 9:30ಕ್ಕೆ ಶಾಂತಿಯುತ ಪ್ರತಿಭಟನೆ ಹಮ್ಮಿಕೊಂಡಿದೆ. ಆದರೆ ಯಾವುದೇ ಬಂದ್‌ಗೆ ಅವಕಾಶ ಇಲ್ಲ ಎಂದು ಪೊಲೀಸ್ ಮೂಲಗಳು ಹೇಳಿವೆ.

ಹಲವು ಸಂಘಟನೆಗಳು ಬಂದ್‌ಗೆ ಕರೆ ನೀಡಿರುವುದರಿಂದ ಜಿಲ್ಲೆಯಲ್ಲಿನ ಬಸ್, ಆಟೋರಿಕ್ಷಾ ಹಾಗೂ ಕಾರ್ಮಿಕ ಸಂಘಟನೆಗಳು ಬಂದ್‌ನಲ್ಲಿ ಪಾಲ್ಗೊಳ್ಳಬಹುದು. ಇದನ್ನು ಹೊರತುಪಡಿಸಿದರೆ, ಖಾಸಗಿ ಹಾಗೂ ಸರಕಾರಿ ಬಸ್‌ಗಳು ಬಂದ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಅಂಗಡಿ ಮುಂಗಟ್ಟುಗಳು ಬಂದ್‌ನಿಂದ ದೂರ ಉಳಿದಿವೆ. ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆ, ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟ, ಬಂದರು ಶ್ರಮಿಕರ ಸಂಘಗಳು ಕೂಡ ಬಂದ್, ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿವೆ.

‘ಬಂದ್ ರೈತರಿಗಷ್ಟೇ ಅಲ್ಲ, ಗ್ರಾಹಕನಿಗೂ ಅನ್ವಯ’

ಭಾರತ್ ಬಂದ್‌ಗೆ ರೈತ ಸಂಘಟನೆಗಳು ದೇಶಾದ್ಯಂತ ನಿರಂತರ ಪ್ರತಿಭಟನೆಗಳು ನಡೆಯುತ್ತಿವೆ. ಇದು ಕೇವಲ ರೈತರಿಗೆ ಮಾತ್ರವಲ್ಲ ಕಾರ್ಮಿಕರು, ಕಟ್ಟಕಡೆಯ ಗ್ರಾಹಕನಿಗೂ ಅನ್ವಯವಾಗಲಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯದರ್ಶಿ ರವಿಕಿರಣ ಪುಣಚ ತಿಳಿಸಿದ್ದಾರೆ.

ಕೃಷಿ ಮಸೂದೆಗಳನ್ನು ಜಾರಿಗೆ ತರಲು ಕೇಂದ್ರ ಸರಕಾರ ಹೊರಡಿಸಿರುವ ಸುಗ್ರೀವಾಜ್ಞೆ ವಾಪಸ್ ಪಡೆಯಲು ಆಗ್ರಹಿಸಿ ನಡೆಸುತ್ತಿರುವ ಬಂದ್‌ಗೆ ಸಂಪೂರ್ಣ ಯಶಸ್ವಿಯಾಗುವ ವಿಶ್ವಾಸವಿದೆ. ಇದು ಎರರಡನೇ ಸ್ವಾತಂತ್ರ ಸಂಗ್ರಾಮ ಎನ್ನುವಷ್ಟು ವ್ಯಾಪಕವಾಗಿ ಹೋರಾಟಗಳು ನಡೆಯು ತ್ತಿವೆ. ಇದು ಕೇಂದ್ರ ಸರಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ ಎಂದರು.

ದ.ಕ. ಜಿಲ್ಲೆಯಲ್ಲೂ ರೈತ, ದಲಿತ, ಕಾರ್ಮಿಕ, ಜನಪರ, ಕನ್ನಡಪರ ಸಂಘಟನೆಗಳು ಸಹಿತ ಹಲವು ರಾಜಕೀಯ ಪಕ್ಷಗಳು ಸಹಿತ ಸ್ವಯಂ ಪ್ರೇರುತ ಬಂದ್‌ಗೆ ಬೆಂಬಲ ಸೂಚಿಸಿವೆ. ಎಲ್ಲ ಸಾರ್ವಜನಿಕರೂ ಬಂದ್‌ಗೆ ಬೆಂಬಲ ನೀಡಿ ಯಶಸ್ವಿಗೊಳಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯದರ್ಶಿ ರವಿಕಿರಣ ಪುಣಚ ಮನವಿ ಮಾಡಿದ್ದಾರೆ.

ಎಂದಿನಂತೆಯೇ ಬಸ್ ಸಂಚಾರ

ಮಂಗಳೂರು ನಗರದಲ್ಲಿ ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ ಎನ್ನುವ ಮಾಹಿತಿ ಇದೆ. ಆದರೆ ನಮ್ಮ ಸಂಘಟನೆಯಿಂದ ಬಂದ್‌ಗೆ ಯಾವುದೇ ಬೆಂಬಲವಿಲ್ಲ. ಎಂದಿನಂತೆಯೇ ಸಿಟಿ ಬಸ್‌ಗಳು ಸಂಚರಿಸಲಿವೆ. ಪ್ರಯಾಣಿಕರು ಅನಗತ್ಯ ಗೊಂದಲಗಳಿಗೆ ಒಳಗಾಗುವ ಅಗತ್ಯವಿಲ್ಲ ಎಂದು ಮಂಗಳೂರು ಸಿಟಿ ಬಸ್‌ಗಳ ಅಸೋಸಿಯೇಶನ್‌ನ ಅಧ್ಯಕ್ಷ ದಿಲ್‌ರಾಜ್ ಆಳ್ವ ಸ್ಪಷ್ಟಪಡಿಸಿದ್ದಾರೆ.

ಬಂದ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್, ಜಿಲ್ಲಾಡಳಿತ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಬಸ್ ನಿಲ್ಲಿಸುವಂತೆ ಸಂಘಕ್ಕೆ ಯಾವುದೇ ಆದೇಶ ಬಂದಿಲ್ಲ. ಹಾಗಾಗಿ ಬಸ್ ಸಂಚಾರವು ಎಂದಿನಂತೆಯೇ ಇರಲಿದೆ ಎಂದು ತಿಳಿಸಿದ್ದಾರೆ.

ಪೊಲೀಸ್ ಬಂದೋಬಸ್ತ್

ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಹಲವು ಸಂಘಟನೆಗಳು ನಡೆಸಲು ಉದ್ದೇಶಿಸಿರುವ ಬಂದ್‌ಗೆ ಸಂಬಂಧಪಟ್ಟಂತೆ ನಗರದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್‌ಕುಮಾರ್ ತಿಳಿಸಿದ್ದಾರೆ.

ಬಂದ್‌ಗೆ ಬೆಂಬಲ ಸೂಚಿಸಿರುವ ಸಂಘಟನೆಗಳ ಜೊತೆ ಮಾತುಕತೆ ನಡೆಸಲಾಗಿದೆ. ಯಾವುದೇ ದುರ್ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ನಗರದ ಆಯಕಟ್ಟಿನ ಜಾಗದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಯಾವುದೇ ಅವಘಡ ಸಂಭವಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News