ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ 4 ಲಕ್ಷಕ್ಕಿಂತ ಕೆಳಗೆ ಕುಸಿತ
ಹೊಸದಿಲ್ಲಿ, ಡಿ.7: ಜುಲೈ ತಿಂಗಳಿನಿಂದೀಚೆಗೆ ಇದೇ ಮೊದಲ ಬಾರಿಗೆ ದೇಶದಲ್ಲಿ ಸಕ್ರಿಯ ಕೋವಿಡ್-19 ಪ್ರಕರಣಗ ಸಂಖ್ಯೆಯು ಸೋಮವಾರ 4 ಲಕ್ಷಕ್ಕಿಂತ ಕೆಳಗೆ ಕುಸಿದಿದೆ.
ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಭಾರತದಲ್ಲಿ ಸ್ಥಿರವಾಗಿ ಕುಸಿಯ ತೊಡಗಿದೆ ಹಾಗೂ ಪರೀಕ್ಷೆಯಲ್ಲಿ ಪಾಸಿಟಿವಿಟಿ ದರ ಕೂಡಾ ಕಳೆದ ಎರಡು ವಾರಗಳಲ್ಲಿ ಶೇ.5ಕ್ಕೆ ಕುಸಿದಿದೆ. ಕಳೆದ 24 ತಾಸುಗಳಲ್ಲಿ ಸುಮಾರು 32981 ಮಂದಿ ಸೋಂಕಿತರಾಗಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ. ಪ್ರಸಕ್ತ ದೇಶದಲ್ಲಿ ಒಟ್ಟಾರೆ 3,96,729 ಸಕ್ರಿಯ ಪ್ರಕರಣಗಳು ಇರುವುದಾಗಿ ಅವು ಮಾಹಿತಿ ನೀಡಿವೆ.
ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 391 ಮಂದಿ ಕೊರೋನ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದು, ದಿಲ್ಲಿಯಲ್ಲಿ ಗರಿಷ್ಠ 69 ಸಾವುಗಳು ಸಂಭವಿಸಿವೆ. ಇದರೊಂದಿಗೆ ದೇಶದಲ್ಲಿ ಈತನಕ ಕೋವಿಡ್-19ಗೆ ಬಲಿಯಾದವರ ಸಂಖ್ಯೆ 1,40,573ಕ್ಕೇರಿದೆ.
ಪಂಜಾಬ್‌ನಲ್ಲಿ ಕೋವಿಡ್-19 ಸಾವಿನ ಪ್ರಕರಣಗಳ ದರವು 3.1 ಆಗಿದ್ದು, ಇದು ದೇಶದಲ್ಲೇ ಗರಿಷ್ಠವಾಗಿದೆ. ಮಹಾರಾಷ್ಟ್ರ ಹಾಗೂ ಸಿಕ್ಕಿಂ ರಾಜ್ಯಗಳಲ್ಲಿ ಕೋವಿಡ್-19 ಸಾವಿನ ದರವು ಕ್ರಮವಾಗಿ 2.58 ಹಾಗೂ 2.18 ಆಗಿದೆ.
ಕೇರಳದಲ್ಲಿ ಅತ್ಯಧಿಕ ಸಂಖ್ಯೆಯ ಸಕ್ರಿಯ ಪ್ರಕರಣಗಳು ದಾಖಲಾಗಿದ್ದರೂ, ಅಲ್ಲಿ ಸಾವಿನ ದರವು ತೀರಾ ಕಡಿಮೆಯಿದ್ದು, 0.37 ಆಗಿದೆ. ಭಾರತದ ಒಟ್ಟಾರೆ ಕೋವಿಡ್-19 ಸಂಭವಿಸಿರುವ ಸಾವಿನ ದರವು 1.45 ಆಗಿದೆ. ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 1188 ಸರಕಾರಿ ಹಾಗೂ 1,019 ಖಾಸಗಿ ಪ್ರಯೋಗಾಲಯಗಳಲ್ಲಿ 8,01,081 ಕೊರೋನ ಪರೀಕ್ಷೆಗಳನ್ನು ನಡೆಸಲಾಗಿದೆ.
ಕೊರೋನ ಸಾಂಕ್ರಾಮಿಕ ಸೋಂಕು ಆರಂಭವಾದಾಗಿನಿಂದ ಭಾರತದಲ್ಲಿ ಒಟ್ಟಾರೆ 14,77,87,656 ಪರೀಕ್ಷೆಗಳನ್ನು ನಡೆಸಲಾಗಿದೆ.
ಕೊರೋನಾ ಸಾಂಕ್ರಾಮಿಕ ರೋಗ ಆರಂಭದಿಂದ ಲೆಕ್ಕ ಹಾಕಿದಲ್ಲಿ, ಭಾರತದ ಒಟ್ಟಾರೆ ಕೊರೋನ ಪಾಸಿಟಿವಿ ದರವು ಶೇ.6.5ಕ್ಕೆ ಕುಸಿದಿದೆ.