×
Ad

ಯುಪಿಸಿಎಲ್‌ನಿಂದ ಪರಿಸರ ಹಾನಿ: ಪರಿಶೀಲನೆಗೆ; ಹಸಿರುಪೀಠದ ತಜ್ಞ ಸಮಿತಿಯಿಂದ ಮಾಹಿತಿ ಸಂಗ್ರಹ

Update: 2020-12-07 21:58 IST

ಉಡುಪಿ, ಡಿ.7: ಪಡುಬಿದ್ರಿ ಸಮೀಪದ ಎಲ್ಲೂರಿನಿಂದ ಕಾರ್ಯಾಚರಿ ಸುತ್ತಿರುವ ಗೌತಮ್ ಅದಾನಿ ಮಾಲಕತ್ವದ ಯುಪಿಸಿಎಲ್ ಸಂಸ್ಥೆಯಿಂದ ಇದುವರೆಗೆ ಯೋಜನಾ ಪ್ರದೇಶದ ಆಸುಪಾಸು ಪರಿಸರದ ಮೇಲಾಗಿರುವ ಹಾನಿಯ ಮರು ಪರಿಶೀಲನೆಗಾಗಿ ಹೊಸದಿಲ್ಲಿಯ ಹಸಿರು ಪೀಠದ (ಗ್ರೀನ್ ಟ್ರಿಬ್ಯೂನಲ್) ಮೂಲಕ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ತಜ್ಞರ ಸಮಿತಿ ಇಂದು ಜಿಲ್ಲೆಗೆ ಆಗಮಿಸಿದೆ.

ಮೂವರು ಸದಸ್ಯರ ಈ ಸಮಿತಿ ಇಂದು ಹಸಿರು ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿರುವ ನಂದಿಕೂರು ಜನಜಾಗೃತಿ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅವರೊಂದಿಗೆ ವೀಡಿಯೋ ಸಂವಾದ, ಚರ್ಚೆ ನಡೆಸಿ 2018ರಲ್ಲಿ ಅಂದಿನ ಪರಿಣಿತರ ಸಮಿತಿ ಸಲ್ಲಿಸಿದ ವರದಿಗೆ ಎತ್ತಿದ ಆಕ್ಷೇಪ ಗಳ ಬಗ್ಗೆ ಮಾಹಿತಿಯನ್ನು ಪಡೆಯಿತು. ಕೊರೋನದ ಕಾರಣದಿಂದ ದುಬೈಯಲ್ಲಿರುವ ಬಾಲಕೃಷ್ಣ ಶೆಟ್ಟಿ ಅವರು ಹುಟ್ಟೂರಿಗೆ ಬರಲು ಅಸಾಧ್ಯವಾಗಿರುವುದರಿಂದ ಅವರೊಂದಿಗೆ ವೀಡಿಯೋ ಮೂಲಕ ಮಾತುಕತೆ ನಡೆಸಿತು.

ಹಿಂದಿನ ಸಿಪಿಸಿಬಿ ಸಮಿತಿ ನೀಡಿದ ವರದಿಯಲ್ಲಿ ಯುಪಿಸಿಎಲ್‌ನಿಂದ ಅದುವರೆಗೆ ಪರಿಸರಕ್ಕಾದ ಹಾನಿಯ ಒಟ್ಟು ಮೊತ್ತ 4.89 ಕೋಟಿ ರೂ.ಎಂದು ತಿಳಿಸಿತ್ತು. ಆದರೆ ಜನಜಾಗೃತಿ ಸಮಿತಿಯ ಅಂದಾಜಿನಂತೆ ಈ ಮೊತ್ತ 178 ಕೋಟಿ ರೂ.ಆಗಿದ್ದು, ಈ ಹಿನ್ನೆಲೆಯಲ್ಲಿ ಸಿಪಿಸಿಬಿ ವರದಿಯ ವಿರುದ್ಧ ಹಸಿರುಪೀಠದ ಮುಂದೆ ಆಕ್ಷೇಪವನ್ನು ಸಲ್ಲಿಸಿರುವುದನ್ನು ತಿಳಿಸಿದರು.

ಈ ಬಗ್ಗೆ ಸಿಪಿಸಿಬಿ ಪ್ರಾದೇಶಿಕ ನಿರ್ದೇಶಕ ಸತೀಶ್ ನೇತೃತ್ವದ ತಜ್ಞ ಸಮಿತಿ, ಬಾಲಕೃಷ್ಣ ಶೆಟ್ಟಿ ಅವರಿಂದ ಸುಮಾರು ಮೂರು ಗಂಟೆಗಳ ಕಾಲ ಮಾಹಿತಿಗಳನ್ನು ಕಲೆಹಾಕಿತು ಎಂದು ತಿಳಿದುಬಂದಿದೆ. ನಾಳೆ ಸಮಿತಿ ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡುವ ಕಾರ್ಯಕ್ರಮವಿದ್ದು, ಮೊದಲು ಉಳ್ಳೂರು ಗ್ರಾಮದಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಲಿದೆ ಎಂದು ತಿಳಿದುಬಂದಿದೆ.

ಯುಪಿಸಿಎಲ್‌ನ ದೋಷಗಳಿಂದ ಮತ್ತು ಪರಿಸರ ನಿಯಮಾವಳಿಗಳ ಉಲ್ಲಂಘನೆಯಿಂದ ಯೋಜನಾ ಅನುಷ್ಠಾನದ ವೇಳೆ ಪರಿಸರದಲ್ಲಿ ಆಗಿರುವ ಬೆಳೆ ಹಾನಿ, ಜನತೆಯ ಆರೋಗ್ಯಕ್ಕಾಗಿರುವ ನಷ್ಟ, ನೀರಿನ ಗುಣಮಟ್ಟ ಕುಸಿತ ಮೊದಲಾದ ಪರಿಸರ ಸಂಬಂಧಿ ವ್ಯತ್ಯಯಗಳನ್ನು ಪರಿಶೀಲಿಸಿ ಈ ಸಮಿತಿಯು ರಾಷ್ಟ್ರೀಯ ಹಸಿರು ಪೀಠಕ್ಕೆ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News