×
Ad

ಟ್ವೀಟ್‍ನಲ್ಲಿ ಅಚ್ಚರಿಯ ಮಾಹಿತಿ ಹೊರ ಹಾಕಿದ ಒಲಿಂಪಿಯನ್ ಅಂಜು ಬಾಬ್ಬಿ ಜಾರ್ಜ್

Update: 2020-12-08 15:35 IST

ಹೊಸದಿಲ್ಲಿ: ಪ್ಯಾರಿಸ್‍ನಲ್ಲಿ 2003ರಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಭಾರತಕ್ಕೆ ಐತಿಹಾಸಿಕ ಕಂಚು ದೊರಕಿಸಿ ಕೊಟ್ಟಿದ್ದ ಒಲಿಂಪಿಯನ್ ಹೈಜಂಪ್ ಪಟು ಅಂಜು ಬಾಬ್ಬಿ ಜಾರ್ಜ್, ತಾವು ಇಷ್ಟೆಲ್ಲಾ ಸಾಧನೆಯನ್ನು ಒಂದು ಕಿಡ್ನಿ ಇಟ್ಟುಕೊಂಡು ಮಾಡಿದ್ದಾಗಿ ಟ್ವೀಟ್ ಮೂಲಕ ಹೇಳಿ ತಮ್ಮ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

ಮೊನ್ಯಾಕೋದಲ್ಲಿ 2005ರಲ್ಲಿ ನಡೆದ ಐಎಎಎಫ್ ವಿಶ್ವ ಅಥ್ಲೆಟಿಕ್ಸ್ ಫೈನಲ್‍ನಲ್ಲಿ ಚಿನ್ನದ ಪದಕ ವಿಜೇತೆಯಾಗಿರುವ ಅಂಜು, ತಾವು  ಹಲವಾರು ಇತಿಮಿತಿಗಳೊಂದಿಗೆ ಹೈಜಂಪ್ ಕ್ರೀಡೆಯಲ್ಲಿ ಭಾಗವಹಿಸುವಂತಾಗಿತ್ತು. ನೋವು ನಿವಾರಕ ಮಾತ್ರೆಗಳೂ ತಮಗೆ ಅಲರ್ಜಿಯುಂಟು ಮಾಡುತ್ತಿದ್ದವು ಎಂದು ಬರೆದುಕೊಂಡಿದ್ದಾರೆ. "ನೀವು ನಂಬಿದರೆ ನಂಬಿ, ಇಲ್ಲದಿದ್ದರೆ ಬಿಡಿ, ಒಂದು ಕಿಡ್ನಿ ಇರುವ ಹೊರತಾಗಿಯೂ ಕ್ರೀಡೆಯಲ್ಲಿ ಅತ್ಯುನ್ನತ ಸಾಧನೆ ಮಾಡಲು ಸಾಧ್ಯವಾದ ಕೆಲವೇ ಕೆಲವು ಅದೃಷ್ಟಶಾಲಿಗಳಲ್ಲಿ ನಾನೊಬ್ಬಳು. ಇಷ್ಟೆಲ್ಲಾ ಇತಿಮಿತಿಗಳ ನಡುವಿನ ಸಾಧನೆಯನ್ನು ಕೋಚ್ ಅವರ ಜಾದೂ ಅಥವಾ ಅವರ ಪ್ರತಿಭೆ ಎನ್ನಬಹುದೇ?,'' ಎಂದು ಅಂಜು ಟ್ವೀಟ್ ಮಾಡಿದ್ದಾರೆ.

ಅಂಜುಗೆ ಅವರ ಪತಿ ರಾಬರ್ಟ್ ಬಾಬ್ಬಿ ಜಾರ್ಜ್ ಅವರೇ ಕೋಚ್ ಎಂಬುದನ್ನು ಇಲ್ಲಿ ಸ್ಮರಿಸಬಹುದು. ಅಂಜು ಅವರ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ಅಂಜು ತಮ್ಮ ಕಠಿಣ ಶ್ರಮ ಹಾಗೂ  ಆತ್ಮಬಲದಿಂದ ಭಾರತಕ್ಕೆ  ಹೆಮ್ಮೆಯುಂಟು ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News