ಕೊಹ್ಲಿ ಹೋರಾಟ ವ್ಯರ್ಥ: ಅಂತಿಮ ಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ ಶರಣಾದ ಭಾರತ
ಸಿಡ್ನಿ, ಡಿ.8: ಮಂಗಳವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ (ಎಸ್‌ಸಿಜಿ) ನಡೆದ ಮೂರನೇ ಮತ್ತು ಅಂತಿಮ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯ ತಂಡವು ಭಾರತ ವಿರುದ್ಧ 12 ರನ್ ಅಂತರದಲ್ಲಿ ಗೆದ್ದಿದೆ. ಪಂದ್ಯ ಸೋತರೂ ಕೂಡಾ ಭಾರತವು ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿದೆ.
ಕ್ಲೀನ್ ಸ್ವೀಪ್ ಗುರಿಯೊಂದಿಗೆ ಪಂದ್ಯ ಆರಂಭಿಸಿದ್ದ ಕೊಹ್ಲಿ ಪಡೆ ಟಾಸ್ ಗೆದ್ದು ಮೊದಲು ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆಸ್ಟ್ರೇಲಿಯ ನಿಗದಿತ 20 ಓವರ್ ಗಳಲ್ಲಿ 186/5 ರನ್ ಗಳಿಸಿತು. ಮ್ಯಾಥ್ಯೂ ವೇಡ್ ಹಾಗೂ ಮ್ಯಾಕ್ಸ್ ವೆಲ್ ಮತ್ತೊಮ್ಮೆ ತಂಡಕ್ಕೆ ಆಸರೆಯಾದರು. ಮ್ಯಾಥ್ಯೂ ವೇಡ್ 53 ಎಸೆತಗಳಲ್ಲಿ 80 ರನ್ ಗಳಿಸಿ ಔಟಾದರು. ಮ್ಯಾಕ್ಸ್ ವೆಲ್ 36 ಎಸೆತಗಳಲ್ಲಿ 54 ರನ್ ಗಳಿಸಿ ನಟರಾಜನ್ ಗೆ ವಿಕೆಟ್ ಒಪ್ಪಿಸಿದರು. ಸ್ಟೀವನ್ ಸ್ಮಿತ್ 24 ರನ್ ಗಳಿಸಿದರು.
ಭಾರತದ ಪರ ಸುಂದರ್ 2, ನಟರಾಜನ್ ಹಾಗೂ ಶಾರ್ದೂಲ್ ಠಾಕೂರ್ ತಲಾ 1 ವಿಕೆಟ್ ಪಡೆದರು.
ಬಳಿಕ ಗುರಿ ಬೆನ್ನಟ್ಟಿದ ಭಾರತಕ್ಕೆ ನಾಯಕ ವಿರಾಟ್ ಕೊಹ್ಲಿ (85) ನೆರವಾದರು. ಆದರೆ ತಂಡವನ್ನು ಗುರಿ ತಲುಪಿದಲು ಅವರು ವಿಫಲರಾದರು. ಪಾಂಡ್ಯ 20, ಶಿಖರ್ ಧವನ್ 28 ರನ್ ಗಳಿಸಿದರು. ಅಂತಿಮವಾಗಿ ಭಾರತವು 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 174 ರನ್ ಗಳಿಸಲಷ್ಟೇ ಶಕ್ತವಾಯಿತು.
ಆಸ್ಟ್ರೇಲಿಯ ಪರ ಸ್ವೆಪ್ಸನ್ 3, ಮ್ಯಾಕ್ಸ್ ವೆಲ್, ಅಬಾಟ್, ಟೈ ಹಾಗೂ ಝಾಂಪ ತಲಾ 1 ವಿಕೆಟ್ ಪಡೆದರು.