ಶೀಘ್ರ ‘ಎನಿಎಲ್ಫ್’ ಆನ್‌ಲೈನ್ ಗ್ರಾಹಕ ಸೇವೆ ಪ್ರಾರಂಭ
ಉಡುಪಿ, ಡಿ.8: ಬೆಂಗಳೂರಿನ ಟೆಲ್ಕಾನ್ ಗ್ರೂಫ್‌ನ ಸಹಯೋಗದೊಂದಿಗೆ ‘ಎನಿಎಲ್ಫ್’ ಎಂಬ ಆನ್ ಡಿಮಾಂಡ್ ಸೇವೆಯನ್ನು ಹೊಂದಿರುವ ಆನ್‌ಲೈನ್ ಅಪ್ಲಿಕೇಷನ್ ಅತಿ ಶೀಘ್ರದಲ್ಲಿ ಉಡುಪಿಯೂ ಸೇರಿದಂತೆ ರಾಜ್ಯದ 15 ಜಿಲ್ಲೆಗಳಲ್ಲಿ ಪ್ರಾರಂಭಗೊಳ್ಳಲಿದೆ ಎಂದು ಗುಂಪಿನ ಸಿಇಓ ಮುಹಮ್ಮದ್ ಝಾಕೀರ್ ಹುಸೇನ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎನಿಎಲ್ಫ್’ ಮೂಲಕ ಸಾರ್ವಜನಿಕರು ತಮಗೆ ಅಗತ್ಯವಿರುವ ಯಾವುದೇ ಸೇವೆಯನ್ನು ಆನ್‌ಲೈನ್ ಮೂಲಕ ಪಡೆಯಲು ಸಾಧ್ಯವಿದೆ. ಅವರಿಗೆ ಬೇಕಾದ ಸೇವೆಯನ್ನು ನುರಿತ ವೃತ್ತಿಪರ ತಜ್ಞರು ಮನೆಗೆ ಬಂದು ನೀಡಲಿದ್ದಾರೆ ಎಂದರು.
ಸದ್ಯ 30 ತುರ್ತು ಸೇವೆಗಳನ್ನು ಗುರುತಿಸಲಾಗಿದೆ. ಉದಾಹರಣೆಗೆ ಟಿವಿ ಕೆಟ್ಟರೆ, ಫ್ರಿಝ್ ಹಾಳಾದರೆ ನೀವು ‘ಎನಿಎಲ್ಫ್’ನ್ನು ಆನ್‌ಲೈನ್ ಮೂಲಕ ಸಂಪರ್ಕಿಸಿದರೆ ಕೆಲವೇ ಹೊತ್ತಿನಲ್ಲಿ ಸಂಬಂಧಪಟ್ಟವರು ನೇರವಾಗಿ ಮನೆಗೆ ಬಂದು ಅದನ್ನು ದುರಸ್ತಿಗೊಳಿಸಲಿದ್ದಾರೆ ಝಾಕೀಸ್ ಹುಸೇನ್ ತಿಳಿಸಿದರು.
ಹೀಗೆ ಬರುವ ವೃತ್ತಿಪರರು ಪ್ರಮಾಣೀಕೃತರಾಗಿದ್ದು, ಉತ್ತಮ ಸೇವೆಯನ್ನು ನೀಡುವರು ಎಂದ ಅವರು ಮುಂದಿನ ಜನವರಿ ತಿಂಗಳಿನಿಂದ ಪ್ರಾರಂಭದಲ್ಲಿ ಉಡುಪಿ ನಗರಕ್ಕೆ ಸೀಮಿತವಾಗಿ ಸೇವೆ ಪ್ರಾರಂಭಗೊಳ್ಳಲಿದ್ದು, ಮುಂದೆ ಅದು ಉಡುಪಿ ಜಿಲ್ಲೆಗೆ ವಿಸ್ತರಣೆಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಡಳಿತ ನಿರ್ದೇಶಕಿ ಪೂಜಾಶ್ರೀ, ಮಾರ್ಕೆಟಿಂಗ್ ಮುಖ್ಯಸ್ಥ ವಿಷ್ಣುಪ್ರಸಾದ್, ಬೆಂಗಳೂರು ಮುಖ್ಯಸ್ಥ ಸಮೀರ್ ಹಾಗೂ ಲತಾ ನಯ್ಯರ್ ಉಪಸ್ಥಿತರಿದ್ದರು.