ಮದುವೆ ಮನೆಯಲ್ಲಿ ದಾಂಧಲೆ : ರೌಡಿಶೀಟರ್ ಸಹಿತ ನಾಲ್ವರ ಬಂಧನ
ಮಂಗಳೂರು, ಡಿ.8: ಪಡೀಲ್ ಬಡ್ಲಗುಡ್ಡೆಯಲ್ಲಿ ಸೋಮವಾರ ರಾತ್ರಿ ಮದುವೆ ಮನೆಯಲ್ಲಿ ನಡೆದ ದಾಂಧಲೆಗೆ ಸಂಬಂಧಿಸಿ ರೌಡಿಶೀಟರ್ ಸಹಿತ ನಾಲ್ವರನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯ ನಿವಾಸಿ ರೌಡಿಶೀಟರ್ ಗೌರೀಶ್, ಆತನ ಸ್ನೇಹಿತರಾದ ತಲಪಾಡಿಯ ಸುಮಂತ್, ಬಜಾಲ್ ಸುಮಂತ್ ಮತ್ತು ಆಶಿತ್ ಬಂಧಿತ ಆರೋಪಿಗಳು.
ಮುಂಬೈಯಿಂದ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದವರು ಗೌರೀಶ್ ಬಳಿ ದಾರಿ ಕೇಳಿದಾಗ ಮಾತಿಗೆ ಮಾತು ಬೆಳೆದು ದಾಂಧಲೆ ನಡೆದಿದೆ. ಈ ಸಂದರ್ಭದಲ್ಲಿ ಗೌರೀಶ್ ತನ್ನ ಗೆಳೆಯರನ್ನು ಕರೆಸಿ ಮಹಿಳೆಯರನ್ನು ಸಹಿತ ಎಳೆದಾಡಿ, ಹೆಲ್ಮೆಟ್‌ನಿಂದ ಹಲ್ಲೆ ಮಾಡಿದ್ದಾನೆ ಎಂದು ದೂರಲಾಗಿದೆ.
ಕರ್ತವ್ಯಕ್ಕೆ ಅಡ್ಡಿ: ಕಂಟ್ರೋಲ್ ರೂಂನಿಂದ ಬಂದ ಸೂಚನೆಯಂತೆ ಸಾಗರ ವಾಹನದಲ್ಲಿ ಕರ್ತವ್ಯದಲ್ಲಿದ್ದ ಕಂಕನಾಡಿ ನಗರ ಠಾಣೆಯ ಹೆಡ್ ಕಾನ್‌ಸ್ಟೇಬಲ್ ನಾರಾಯಣ ಎಂ.ಕೆ. ಸ್ಥಳಕ್ಕೆ ತೆರಳಿ ಗೌರೀಶ್ ನನ್ನು ವಶಕ್ಕೆ ಪಡೆಯಲು ಮುಂದಾದಾಗ ಆರೋಪಿಗಳು ಸಮವಸ್ತ್ರಕ್ಕೆ ಕೈ ಹಾಕಿ ಎಳೆದಾಡಿ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿದ್ದರು. ಅಲ್ಲದೆ, ಬೆದರಿಕೆಯೊಡ್ಡಿ ಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಕಂಕನಾಡಿ ನಗರ ಠಾಣೆ ಪೊಲೀಸರು ರಾತ್ರಿಯೇ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರೌಡಿಶೀಟರ್ ಗೌರೀಶ್ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಕಳೆದ ವರ್ಷ ಆತನನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮುಂದಾಗಿದ್ದ. ಆ ಸಂದರ್ಭ ಆತನ ಕಾಲಿಗೆ ಗುಂಡು ಹೊಡೆದು ಪೊಲೀಸರು ಬಂಧಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.