×
Ad

ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಪ್ರಭಾವ: ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಗಾಳಿ, ಮಳೆ

Update: 2020-12-08 21:30 IST

ಮಂಗಳೂರು, ಡಿ.8: ಕರಾವಳಿ ಕರ್ನಾಟಕ ಭಾಗದಲ್ಲಿ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಗುಡುಗು ಸಹಿತ ಭಾರೀ ಗಾಳಿ-ಮಳೆಯಾಗಿದೆ. ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ ಸುರಿದಿದೆ.

ಮಂಗಳೂರು, ಬೆಳ್ತಂಗಡಿ, ಕಡಬ, ಸುಳ್ಯ, ಪುತ್ತೂರು ತಾಲೂಕು ಸೇರಿದಂತೆ ಮರ್ಕಂಜ, ಪಂಬೆತ್ತಾಡಿ, ಕಲ್ಮಡ್ಕ, ಪಂಜ, ಕರಿಕಳ, ಎಣ್ಮೂರು ಸಹಿತ ಹಲವೆಡೆ ಮಂಗಳವಾರ ಸಂಜೆ ಭಾರೀ ಮಳೆ ಸುರಿದಿದ್ದು, ಭೂಮಿಗೆ ತಂಪೆರೆದಿದೆ.

ಮಂಗಳವಾರ ದಿನವಿಡೀ ಉರಿಬಿಸಿಲಿನ ವಾತಾವರಣ ಕಂಡುಬಂದಿತ್ತು. ಸಂಜೆಯಾಗುತ್ತಿದ್ದಂತೆ ವಾತಾವರಣದಲ್ಲಿ ಬದಲಾವಣೆಗೊಂಡು ಜಿಲ್ಲೆಯ ಘಟ್ಟದ ತಪ್ಪಲು ಪ್ರದೇಶ ಸೇರಿದಂತೆ ಜಿಲ್ಲೆಯಾದ್ಯಂತ ವರುಣ ಆರ್ಭಟಿಸಿದೆ.

ಎರಡು ದಿನ ಮಳೆ: ಅರಬ್ಬಿ ಸಮುದ್ರದಲ್ಲಿ ಕಂಡು ಬಂದಿರುವ ಚಂಡಮಾರುತ ಪರಿಚಲನೆ ಆಗ್ನೇಯ ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾ ಸಾಗರ ಸಮಭಾಜಕ ವೃತ್ತದ ಬಳಿ ಸಮುದ್ರ ಮಟ್ಟಕ್ಕಿಂತ 3.1 ಕಿ.ಮೀ.ಎತ್ತರದಲ್ಲಿ ಕೇಂದ್ರೀಕೃತವಾಗಿದೆ. ಪರಿಣಾಮ ಗಾಳಿಯಿಂದಾಗಿ ಮೋಡ ಗಳ ಚಲನೆ ಹೆಚ್ಚಾಗಿದ್ದು, ಕರಾವಳಿ ಭಾಗದಲ್ಲಿ ಇನ್ನೂ ಎರಡು ದಿನ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಜಿಲ್ಲೆಯ ಕನಕಮಜಲಿನಲ್ಲಿ ಜಿಲ್ಲೆಯಲ್ಲೇ ಅತ್ಯಧಿಕ 37 ಮಿ.ಮೀ. ಮಳೆ ದಾಖಲಾಗಿದೆ. ಉಳಿದಂತೆ ಅರಿಯಡ್ಕ 23, ಆರ್ಯಾಪು 17.5, ನರಿಮೊಗರಿ 16.5, ಸುಳ್ಯ ನಗರ 15 ಮಿ.ಮೀ., ಕಾಣಿಯೂರು 14, ಬಳ್ನಾಡು 12, ಮರ್ಕಂಜ, ಕಲ್ಮಡ್ಕ ದಲ್ಲಿ 11 ಮಿ.ಮೀ. ಮಳೆ ಸುರಿದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮಂಗಳವಾರ ದಿನದ ಗರಿಷ್ಠ ತಾಪಮಾನ 36.1 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರೀ ಮಳೆಯೊಂದಿಗೆ ಗುಡುಗು-ಮಿಂಚಿನ ಅಬ್ಬರ ಮತ್ತು ಜೋರಾದ ಗಾಳಿ ಬೀಸಿದೆ. ಹಲವೆಡೆ ರಾತ್ರಿವರೆಗೂ ವಿದ್ಯುತ್ ಸಂಪರ್ಕ ಕಡಿತ ಗೊಂಡಿತ್ತು. ರಾತ್ರಿ ವೇಳೆ ಮಂಗಳೂರು ನಗರ, ಮೂಡುಬಿದಿರೆ, ಬಂಟ್ವಾಳ ತಾಲೂಕಿನ ವಿವಿಧೆಡೆ ಮಳೆ ಮುಂದುವರಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News