1954ರ ಬಳಿಕ 86 ಸೆಂಟಿ ಮೀಟರ್ ಬೆಳೆದ ಎವರೆಸ್ಟ್!
Update: 2020-12-08 23:49 IST
ಕಠ್ಮಂಡು (ನೇಪಾಳ), ಡಿ. 8: ಜಗತ್ತಿನ ಅತ್ಯುನ್ನತ ಶಿಖರ ಮೌಂಟ್ ಎವರೆಸ್ಟ್‌ನ ಪರಿಷ್ಕೃತ ಎತ್ತರ 8,848.86 ಮೀಟರ್ ಎಂಬುದಾಗಿ ನೇಪಾಳ ಮತ್ತು ಚೀನಾಗಳು ಮಂಗಳವಾರ ಜಂಟಿಯಾಗಿ ಘೋಷಿಸಿವೆ. ಇದು 1954ರಲ್ಲಿ ಭಾರತ ಮಾಡಿದ ಅಳತೆಗಿಂತ 86 ಸೆಂಟಿ ಮೀಟರ್‌ನಷ್ಟು ಹೆಚ್ಚಾಗಿದೆ.
2015ರಲ್ಲಿ ನೇಪಾಳದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಶಿಖರದ ಎತ್ತರದಲ್ಲಿ ಬದಲಾವಣೆಯಾಗಿರಬಹುದು ಎಂಬ ಚರ್ಚೆಗಳ ಹಿನ್ನೆಲೆಯಲ್ಲಿ ಅದರ ನಿಖರ ಎತ್ತರವನ್ನು ಅಳೆಯಲು ನೇಪಾಳ ಸರಕಾರ ನಿರ್ಧರಿಸಿತ್ತು.
1954ರಲ್ಲಿ ಭಾರತೀಯ ಸರ್ವೇಕ್ಷಣಾ ಇಲಾಖೆ ಮಾಡಿದ ಅಳತೆಯಂತೆ, ಮೌಂಟ್ ಎವರೆಸ್ಟ್‌ನ ಎತ್ತರ 8,848 ಮೀಟರ್ ಆಗಿತ್ತು.
ಈ ಹಿಂದೆ ಚೀನಾವೂ ಅಳತೆ ಮಾಡಿದ್ದು, ಶಿಖರದ ಎತ್ತರ 8,844.43 ಮೀಟರ್ ಎಂದು ಹೇಳಿತ್ತು. ಅದು ಭಾರತದ ಅಳತೆಗಿಂತ ಸುಮಾರು 4 ಮೀಟರ್ ಕಡಿಮೆಯಾಗಿತ್ತು.