×
Ad

ಉಪ್ಪಳ: ಬಾವಿ ಸ್ವಚ್ಛಗೊಳಿಸುತ್ತಿದ್ದ ವೇಳೆ ಮಣ್ಣು ಕುಸಿದು ಓರ್ವ ಮೃತ್ಯು, ಇಬ್ಬರ ರಕ್ಷಣೆ

Update: 2020-12-09 16:23 IST

ಕಾಸರಗೋಡು, ಡಿ.9: ಸ್ವಚ್ಛಗೊಳಿಸುತ್ತಿದ್ದ ವೇಳೆ ಬಾವಿಯ ಒಂದು ಪಾರ್ಶ್ವ ಕುಸಿದ ಪರಿಣಾಮ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಉಪ್ಪಳ ಮಣ್ಣಂಗುಳಿ ಎಂಬಲ್ಲಿ ನಡೆದಿರುವುದು ವರದಿಯಾಗಿದೆ. ಈ ವೇಳೆ ಅಪಾಯಕ್ಕೆ ಸಿಲುಕಿದ್ದ ಇಬ್ಬರನ್ನು ರಕ್ಷಿಸಲಾಗಿದೆ.

ಮೃತರನ್ನು ಕರ್ನಾಟಕ ಚಿತ್ರದುರ್ಗ ಎಚ್.ಎಸ್.ಪಾಳ್ಯ ನಿವಾಸಿ ನಿಸಾರ್(28) ಎಂದು ಗುರುತಿಸಲಾಗಿದೆ. ಜೊತೆಗೆ ಕೆಲಸ ಮಾಡುತ್ತಿದ್ದ ಚಿತ್ರದುರ್ಗ ಎಚ್.ಎಸ್. ಪಾಳ್ಯದ ಮುಖ್ತಾರ್(28) ಮತ್ತು ಮಂಜಣ್ಣ(50) ಎಂಬವರನ್ನು ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ.

ಮಣ್ಣಂಗುಳಿ ಮೈದಾನ ಸಮೀಪ ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಬಾವಿಯನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದ ವೇಳೆ ಏಕಾಏಕಿ ಬಾವಿಯ ಒಂದು ಪಾರ್ಶ್ವದ ಮಣ್ಣು ಕುಸಿದಿದೆ. ಈ ವೇಳೆ ನಿಸಾರ್ ಮಣ್ಣಿನಡಿಯಲ್ಲಿ ಸಿಲುಕಿಕೊಂಡರೆನ್ನಲಾಗಿದೆ. ಅವರನ್ನು ರಕ್ಷಿಸಲು ಮುಖ್ತಾರ್ ಮತ್ತು ಮಂಜಣ್ಣ ಕೂಡಲೇ ಬಾವಿಗಿಳಿದರೆನ್ನಲಾಗಿದೆ. ಈ ಸಂದರ್ಭ ಮತ್ತಷ್ಟು ಮಣ್ಣು ಕುಸಿದ ಪರಿಣಾಮ ಮೂವರು ಕೂಡಾ ಸಿಲುಕಿಕೊಂಡರೆನ್ನಲಾಗಿದೆ.

ಅಷ್ಟರಲ್ಲಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು. ಅದರಂತೆ ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬಾವಿಯಲ್ಲಿ ಸಿಲುಕಿದ್ದ ಮೂವರನ್ನೂ ಮೇಲಕ್ಕೆತ್ತಿದರು. ತೀವ್ರ ಅಸ್ವಸ್ಥರಾಗಿದ್ದ ಮೂವರನ್ನು ಉಪ್ಪಳದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ನಿಸಾರ್ ಅಷ್ಟರಲ್ಲೇ ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News