ಯುವತಿಗೆ ಲೈಂಗಿಕ ಕಿರುಕುಳ : ಪೋಕ್ಸೋ ಕಾಯ್ದೆಯಡಿ ಆರೋಪಿ ಸೆರೆ
ಬಂಟ್ವಾಳ, ಡಿ. 9: ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಯುವತಿಯೋರ್ವಳ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಗರ್ಭವತಿಯನ್ನಾಗಿಸಿದ ಪ್ರಕರಣದಲ್ಲಿ ಉಪ್ಪಿನಂಗಡಿ ಸನಿಹದ ಹಿರೆಬಂಡಾಡಿ ನಿವಾಸಿ, ಅಜಯ್ (21) ಎಂಬಾತನನ್ನು ಪುಂಜಾಲಕಟ್ಟೆ ಪೊಲೀಸರು ಫೋಕ್ಸೊ ಕಾಯ್ದೆಯಡಿ ಬಂಧಿಸಿದ್ದಾರೆ.
ಯುವತಿ ಆರೋಪಿಯ ಸಂಬಂಧಿಯಾಗಿದ್ದು ಆಕೆಯ ಜತೆ ಸಖ್ಯ ಬೆಳೆಸಿದ್ದ ಆರೋಪಿ ಆಕೆಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದ. ಇದರ ಪರಿಣಾಮ ಆಕೆ ಗರ್ಭಿಣಿಯಾಗಿದ್ದು ಹೆರಿಗೆ ಬೇನೆಯಿಂದ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆಸ್ಪತ್ರೆಯ ದಾರಿ ಮಧ್ಯೆ ವಾಹನದಲ್ಲೇ ಆಕೆಯ ಮಗು ಸಾವನ್ನಪ್ಪಿತ್ತು. ಆರೈಕೆಗಾಗಿ ಪುತ್ತೂರು ಆಸ್ಪತ್ರೆಗೆ ಸೇರಿದ್ದ ಆಕೆಯ ವಿಚಾರದ ಬಗ್ಗೆ ಪುಂಜಾಲಕಟ್ಟೆ ಠಾಣೆಗೆ ಮಾಹಿತಿ ಬಂದ ಮೇರೆಗೆ ಆರೋಪಿ ಅಜಯ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆತನನ್ನು ಬಂಧಿಸಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆತನಿಗೆ ಮುಂದಿನ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.